ಕಾರ್ಕಳದ ಶಾಸಕ ಸುನಿಲ್‌ ಕುಮಾರ್‌ ಪುಣೆ ಸ್ನೇಹಮಿಲನ

ಶ್ರೇಷ್ಠ  ಇತಿಹಾಸವನ್ನು ಹೊಂದಿದ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೈದುಂಬಿಕೊಂಡ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಸಿದ್ಧಿಯನ್ನು ಪಡೆದ ಧಾರ್ಮಿಕವಾಗಿ ಜಗತ್ತಿನಲ್ಲಿಯೇ ಗುರುತಿಸಿಕೊಂಡ, ಅನನ್ಯ ಸಾಧಕರುಗಳ ಸಾಧನೆಯೊಂದಿಗೆ ಕೀರ್ತಿ ಪಡೆದುಕೊಂಡ ಕ್ಷೇತ್ರವೊಂದಿದ್ದರೆ  ಅದು ನಮ್ಮ ಕಾರ್ಕಳ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರದ ಶಾಸಕ ನಾಗಿದ್ದುಕೊಂಡು ಕ್ಷೇತ್ರದ ಜನರನ್ನು ನಿರಂತರವಾಗಿ ಸಂಪರ್ಕಿಸುತ್ತಾ   ರಸ್ತೆ, ನೀರು, ಶಿಕ್ಷಣ, ಆರೋಗ್ಯ ಗಳೆಲ್ಲದರ ಪ್ರಾಥಮಿಕ ಅಗತ್ಯಗಳನ್ನು ಪರಿಪೂರ್ಣಗೊಳಿಸುವಲ್ಲಿ, ಭವ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ, ತಮ್ಮ ನಾಡಿನ ಬಗೆಗೆ ಎಲ್ಲರಲ್ಲೂ ಅಭಿಮಾನವನ್ನು ಹೊಂದುವಲ್ಲಿ  ಹೊರನಾಡಿನಲ್ಲಿರುವ ಕಾರ್ಕಳದ ಜನರ ದುಃಖ ದುಮ್ಮಾನಗಳನ್ನು ಆಲಿಸಿ ಅವರೊಂದಿಗೆ ಪ್ರೀತಿಯಿಂದ ಬೆರೆತು ಸಲಹೆ ಸೂಚನೆಗಳನ್ನು ಪಡೆದುಕೊಂಡು ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯೊಂದಿಗೆ ಕಾರ್ಕಳವನ್ನು ವಿಶ್ವದಲ್ಲೇ ಗುರುತಿಸುವಂತಹ ಕ್ಷೇತ್ರವನ್ನಾಗಿ ರೂಪಿಸುವಲ್ಲಿ  ಪೂರಕ ಹೆಜ್ಜೆಯೇ ಸ್ನೇಹಮಿಲವಾಗಿದೆ ಎಂದು ಕಾರ್ಕಳದ  ಶಾಸಕ ವಿ. ಸುನಿಲ್‌ ಕುಮಾರ್‌ ಅವರು  ನುಡಿದರು.

ಮಾ. 5ರಂದು ಕೃಷ್ಣ ಸುಂದರ್‌ ಗಾರ್ಡನ್‌ನಲ್ಲಿ ಹಮ್ಮಿಕೊಂಡ ಕಾರ್ಕಳದ ಬಂಧುಗಳ ಸ್ನೇಹಮಿಲನ ಪುಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಸಕನಾಗಿದ್ದುಕೊಂಡು ಕ್ಷೇತ್ರದ ಪ್ರತಿಯೊಂದು ಗ್ರಾಮಗಳನ್ನೂ ಸಂಪರ್ಕಿಸಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆ ಮೂಲಕ ಪ್ರಾಮಾಣಿಕವಾಗಿ ಕಾರ್ಕಳದ ಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಅದೇ ರೀತಿ ಕಾರ್ಕಳ ತಾಲೂಕು ರಚನೆಗೊಂಡು ನೂರು ವರ್ಷಗಳು ಆಗುತ್ತಿರುವ ಸಂದರ್ಭ ವರ್ಷವಿಡೀ ನೂರರ ಸಂಭ್ರಮವನ್ನು ಅಭಿವೃದ್ಧಿಯ ವರ್ಷವಾಗಿ ಆಚರಿಸುತ್ತಿದ್ದೇವೆ. ಆದರೂ ಶೇ. 100 ರಷ್ಟು ಅಭಿವೃದ್ಧಿ ಒಮ್ಮೆಲೇ ಸಾಧ್ಯವಿಲ್ಲ. ಭವಿಷ್ಯದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಬೇಕಾಗಿದೆ, ಯಾವ ರೀತಿಯ ಪ್ರಗತಿಯ ಅಗತ್ಯವಿದೆ ಎಂಬ ಬಗ್ಗೆ ನೀವು ನೀಡಿದ ಸಲಹೆಗಳನ್ನು ತುಂಬು ಹೃದಯದಿಂದ ಸ್ವೀಕರಿಸಿ ಅನುಷ್ಠಾನಗೊಳಿಸುವಲ್ಲಿ ಪ್ರಯತ್ನಿಸಲಾಗುವುದು.  ಊರಿನ ದೈವ, ದೇವಸ್ಥಾನಗಳ ಜೀಣೊìàದ್ಧಾರವೇ ಇರಲಿ, ಬ್ರಹ್ಮಕಲಶವೇ  ಇರಲಿ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯೇ ಆಗಲಿ ಪುಣೆ ಮುಂಬಯಿಯ ಬಂಧುಗಳ ಕೊಡುಗೆಮಹತ್ತರವಾಗಿದೆ. ಅದೇ ರೀತಿ ಕಾರ್ಕಳದ ಅಭಿವೃದ್ಧಿ ಎಂಬ ಬ್ರಹ್ಮಕಲಶಕ್ಕೆ ಎಲ್ಲರೂ ಸಹಕಾರ ನೀಡಿ ಎಂದರು.

ಇಂದಿನ ಯುವ ಪೀಳಿಗೆಗೆ ನಮ್ಮ ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಆ ಮೂಲಕ ನಮ್ಮ ಸಾಂಸ್ಕೃತಿಕ, ಸಾಮಾಜಿಕ ಬೆಳವಣಿಗೆಯನ್ನು ಮಾಡಲು ನನ್ನೊಂದಿಗೆ ಕಾರ್ಕಳದ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಕ್ಷೇತ್ರದ ಅಭಿವೃದ್ಧಿ ಕೇವಲ ಶಾಸಕ, ಸರಕಾರದಿಂದ ಮಾತ್ರ ಸಾಧ್ಯವಿಲ್ಲ ಜನರ ಸಹಭಾಗಿತ್ವವೂ ಮುಖ್ಯವಾಗಿದೆ. ಪುಣೆಯಲ್ಲಿ ಇಂದು ನಡೆದ ಈ ಕಾರ್ಯಕ್ರಮವನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸುವಲ್ಲಿ ಸಹಕಾರ ನೀಡಿದ ಪುಣೆಯ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಉತ್ತಮವಾಗಿ ಸಂಘಟಿಸುವಲ್ಲಿ ನೆರವಾದ ಸಂಘಟಕರಿಗೆ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಬಂಧುಗಳಿಗೆ ಕೃತಜ್ಞತೆಗಳು.   ಕಾರ್ಕಳವನ್ನು ಮಾದರಿ ಕ್ಷೇತ್ರವಾಗಿ ರೂಪಿಸಲು ಒಟ್ಟಾಗಿ ಶ್ರಮಿಸೋಣ ಎಂದರು.

ಪುಣೆ  ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅಭಿವೃದ್ಧಿಯ ಒಬ್ಬ ಮಹಾಶಕ್ತಿಯೆಂದರೆ ಅದು ಸುನಿಲ… ಕುಮಾರ್‌. ಅವರ ಶಿಸ್ತುಬದ್ಧತೆ, ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ. ಪುಣೆಯ ಈ ಸ್ನೇಹಮಿಲನ ಕಾರ್ಕಳದ ಸಮಸ್ಯೆಗಳನ್ನು ಅರಿತು ಕಾರ್ಯಗತ ಮಾಡುವಲ್ಲಿ ಉತ್ತಮ ವೇದಿಕೆಯಾಗಿದೆ. ಒಬ್ಬ ಶಾಸಕರಾಗಿ ನಮ್ಮಲ್ಲಿಗೆ ಸ್ವತಃ ಬಂದು ನಮ್ಮನ್ನು ಭೇಟಿಯಾಗುತ್ತಿರುವುದು ನಮ್ಮ ಪುಣ್ಯ. ನಾವೆಲ್ಲಾ ಅವರ ಕಾರ್ಯಕ್ಕೆ ಸಹಕಾರ ನೀಡೋಣ ಎಂದರು.

ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಣಿರಾಜ್‌ ಶೆಟ್ಟಿ ಮಾತನಾಡಿ,  ಪûಾತೀತ ನಾಯಕನಾಗಿ ಕಾರ್ಕಳದ ಸಂಪೂರ್ಣ ಏಳಿಗೆಯಲ್ಲಿ ತೊಡಗಿಕೊಂಡವರು ಸುನಿಲ್‌ ಕುಮಾರ್‌. ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆ ಯಲ್ಲಿ ಅವರ ಕಾರ್ಯ ಸ್ತುತ್ಯರ್ಹ ಎಂದರು.

ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿ ಓಣಿಮಜಲು, ಪುಣೆ ಕನ್ನಡ ಸಂಘದ ಅಧ್ಯಕ್ಷ ಕುಶಲ್‌ ಹೆಗ್ಡೆ, ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ  ಮೆಂಡನ್‌, ಪುಣೆ ತುಳುಕೂಟದ ಗೌರವಾಧ್ಯಕ್ಷ ಮಿಯ್ನಾರು ರಾಜ್‌ಕುಮಾರ್‌ ಎಂ. ಶೆಟ್ಟಿ, ಪುಣೆ ಬಂಟ್ಸ್‌ ಅಸೋಸಿಯೇಶನ್‌ ನಿಕಟಪೂರ್ವ ಅಧ್ಯಕ್ಷ ಮಿಯ್ನಾರು ಜಯ ಶೆಟ್ಟಿ, ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಸದಾಶಿವ ಸಾಲ್ಯಾನ್‌, ಪುಣೆ ರೆಸ್ಟೋರೆಂಟ್‌ ಹೊಟೇಲಿಯರ್ಸ್‌ ಅಸೋಸಿಯೇಶನ್‌  ಅಧ್ಯಕ್ಷ ಗಣೇಶ್‌  ಶೆಟ್ಟಿ, ಪಿಂಪ್ರಿ ಚಿಂಚಾÌಡ್‌ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ ಬಜಗೋಳಿ, ಮುಂಬಯಿ  ಉದ್ಯ ಮಿಗಳಾದ  ರತ್ನಾಕರ ಶೆಟ್ಟಿ, ಮಹೇಶ್‌  ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಉಳೆಪಾಡಿ, ತುಳು ಚಲನಚಿತ್ರ ನಿರ್ಮಾಪಕ ಉದಯ ಶೆಟ್ಟಿ ಕಾಂತಾವರ, ಶ್ರೀಧರ ಪೂಜಾರಿ ಲೋನಾವಾಲ, ಪುಣೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಹರೀಶ್‌ ಕುಲಾಲ್‌, ಪುಣೆ ತುಳುಕೂಟದ  ಪಿಂಪ್ರಿ – ಚಿಂಚಾÌಡ್‌ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ್‌  ಸುವರ್ಣ ಉಪಸ್ಥಿತರಿದ್ದರು.

ಜಗನ್ನಾಥ ಶೆಟ್ಟಿ  ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಉಪಸ್ಥಿತರಿದ್ದ ಕಾರ್ಕಳದ ಬಂಧುಗಳು ತಮ್ಮೂರಿನ ಸಮಸ್ಯೆಗಳ ಬಗ್ಗೆ  ಶಾಸಕರಿಗೆ ತಿಳಿಸಿದರು. ರೇಶ್ಮಾ ಉದಯ ಶೆಟ್ಟಿ ಇನ್ನ ಪ್ರಾರ್ಥಿಸಿದರು. ಅತಿಥಿ-ಗಣ್ಯರನ್ನು ಶಾಲು ಮತ್ತು  ಪುಷ್ಪಗುತ್ಛವನ್ನಿತ್ತು ಶಾಸಕ ಸುನಿಲ್‌ ಕುಮಾರ್‌  ಸತ್ಕರಿಸಿದರು. ಕಾರ್ಯಕ್ರಮವನ್ನು ಅರ್ಪಿತಾ ಪ್ರಶಾಂತ್‌ ಶೆಟ್ಟಿ ಕಟಪಾಡಿ ನಿರೂಪಿಸಿದರು. ವಿಶ್ವನಾಥ ಪೂಜಾರಿ ಕಡ್ತಲ ಸ್ವಾಗತಿಸಿದರು. ಸಂತೋಷ್‌ ಶೆಟ್ಟಿ ಎಣ್ಣೆಹೊಳೆ  ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ  ಉಮೇಶ್‌ ಹೆಗ್ಡೆ ಕಡ್ತಲ ನೇತೃತ್ವದಲ್ಲಿ ಖ್ಯಾತ ಗಾಯಕ ಎರ್ಮಾಳ್‌ ಹರೀಶ್‌ ಶೆಟ್ಟಿ ಮತ್ತು ಪ್ರಸಿದ್ಧ ಹಾಸ್ಯ ಕಲಾವಿದರುಗಳ ಕೂಡುವಿಕೆಯೊಂದಿಗೆ ರಾಗ ರಸೊಕು ತೆಲಿಕೆದ ನೆಸಲ…  ಎನ್ನುವ ವಿನೂತನ  ಹಾಸ್ಯ ಹಾಗೂ ಸಂಗೀತದ ಕಾರ್ಯಕ್ರಮ, ಶಂಕರ ಪೂಜಾರಿಯವರಿಂದ ಗಾಯನ, ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ತುಳು-ಕನ್ನಡಿಗರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*