ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಪೌಷ್ಠಿಕಾಂಶಗಳುಳ್ಳ ಆಹಾರವನ್ನು ಸೇವಿಸದ ಕಾರಣದಿಂದಾಗಿ ಬಹಳಷ್ಟು ಮಕ್ಕಳು ಸೇರಿದಂತೆ ಹಿರಿಯರು ಹಲವು ರೀತಿಯ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಮಗುವಾಗಿರುವಾಗಲೇ ಪೌಷ್ಠಿಕಾಂಶ ಅದರಲ್ಲೂ ಸ್ತನ್ಯಪಾನ ಮಾಡಿಸುವ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ನೀಡಬೇಕಾಗಿದೆ. ಅಪೌಷ್ಠಿಕತೆಯಿಂದಾಗಿ ಇವತ್ತು ಮಕ್ಕಳು ಸಾವನ್ನಪ್ಪುತ್ತಿದ್ದು, ಅದನ್ನು ತಡೆಯುವ ಸಲುವಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆಯಲ್ಲದೆ, ಸೆ.1 ರಿಂದ 7ರವರೆಗೆ ಪೌಷ್ಠಿಕಾಂಶ ಸಪ್ತಾಹ ಆಚರಿಸಲಾಗುತ್ತಿದೆ.

ನಾವು ಆರೋಗ್ಯವಂತರಾಗಿರಬೇಕಾದರೆ ವಯಸ್ಸಿಗೆ ತಕ್ಕಂತೆ ನಮ್ಮ ಆಹಾರ ಸೇವನೆಯಲ್ಲಿ ಒಂದಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಂದು ಆಹಾರ ನಮಗೆ ಇಷ್ಟವಾದರೂ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕೇವಲ ಬಾಯಿ ಚಪಲಕ್ಕೆ ಸಿಕ್ಕಿದನೆಲ್ಲ ತಿಂದು ಸಮಸ್ಯೆ ಸೃಷ್ಠಿಸಿಕೊಳ್ಳುವುದಕ್ಕಿಂತ ನಮ್ಮ ದೇಹಕ್ಕೆ ಸರಿ ಹೊಂದುವ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.

ಇತ್ತೀಚಿಗಿನ ದಿನಗಳಲ್ಲಿ ನಾವು ತಿನ್ನುವ ಆಹಾರಗಳು ನಾಲಿಗೆ ಚಪ್ಪರಿಸಿ ತಿನ್ನುವಂತಹ ರುಚಿಯನ್ನು ಹೊಂದಿರುತ್ತವೆಯಾದರೂ ಅವು ಆರೋಗ್ಯಕ್ಕೆ ಹೊಂದುವುದಿಲ್ಲ. ಹೀಗಾಗಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ವಯಸ್ಸಾದವರಂತು ತಮ್ಮ ವಯಸ್ಸಿಗೆ ತಕ್ಕಂತೆ ಜೀರ್ಣ ಶಕ್ತಿಯಿರುವಂತಹ ಆಹಾರವನ್ನು ಸೇವಿಸುವುದು ಒಳಿತು. ಕಾರಣ ವಯಸ್ಸಾದಂತೆಲ್ಲ ಹಸಿವು ಮತ್ತು ಜೀರ್ಣಶಕ್ತಿ ಕಡಿಮೆಯಾಗುವುದರಿಂದ ಪ್ರೊಟೀನ್, ಕೊಬ್ಬು, ಖನಿಜಾಂಶ ಹಾಗೂ ಜೀವಸತ್ವಗಳುಳ್ಳ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಈ ಆಹಾರದ ಪ್ರಮಾಣವು ದಿನಕ್ಕೆ 300 ರಿಂದ 330 ಗ್ರಾಂ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ದಿನಕ್ಕೆ ಮೂರು ಬಾರಿ ಊಟ ಮಾಡುತ್ತೇವೆ. ಆದರೆ ವಯಸ್ಸಾದವರು ಕಡಿಮೆ ಪ್ರಮಾಣದಲ್ಲಿ ಹಲವು ಬಾರಿ ಊಟ ಮಾಡುವುದು ಒಳ್ಳೆಯದು. ಆಹಾರದಲ್ಲಿ ಅಕ್ಕಿ, ರಾಗಿ, ಗೋಧಿ, ಜೋಳ ಮೊದಲಾದ ಧಾನ್ಯಗಳ ಬಳಕೆ ಒಳ್ಳೆಯದು. ನಿತ್ಯ ಉಪಯೋಗಿಸುವ ಆಹಾರದಲ್ಲಿ ಪ್ರೊಟೀನ್ಯುಕ್ತ ಬೇಳೆಕಾಳುಗಳು ಇರುವಂತೆ ನೋಡಿಕೊಳ್ಳಬೇಕು. ಇವುಗಳನ್ನು ಕನಿಷ್ಟ 60ಗ್ರಾಂನಷ್ಟಾದರೂ ಸೇವಿಸಬೇಕು. ಇದರೊಂದಿಗೆ ದಿನಕ್ಕೆ ಕನಿಷ್ಟ 2 ರಿಂದ 3 ಲೋಟದಷ್ಟು ಹಾಲು ಅಥವಾ ಮೊಸರು ಸೇವಿಸಬೇಕು. ಮೊಳಕೆ ಕಾಳುಗಳು, ಮೊಟ್ಟೆಯ ಬಿಳಿಭಾಗ, ಮೀನು, ಜತೆಗೆ ಸೊಪ್ಪು ಸೇರಿದಂತೆ ಗೆಡ್ಡೆಗೆಣಸು ತರಕಾರಿ ಸೇವಿಸುವುದು ಅಗತ್ಯ.

 

ನಾರಿನ ಅಂಶವಿಲ್ಲದ ಸಂಸ್ಕರಿಸಿದ ಆಹಾರ ಪದಾರ್ಥ, ಮೈದಾದಿಂದ ತಯಾರಿಸಿದ ಬ್ರೆಡ್, ಬನ್, ನೂಡಲ್ಸ್, ನಾನ್ ಮುಂತಾದ ಆಹಾರಗಳನ್ನು ಸೇವಿಸಬೇಡಿ. ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡಿ, ಮದ್ಯಪಾನ, ಧೂಮಪಾನವನ್ನು ತ್ಯಜಿಸಿ, ಕೊಲೆಸ್ಟ್ರಾಲ್ ಹೆಚ್ಚಿಸುವ ಬೆಣ್ಣೆ, ತುಪ್ಪ, ವನಸ್ಪತಿ, ಬಜ್ಜಿ, ಬೋಂಡ, ಪೂರಿ, ಹಪ್ಪಳ ಮೊದಲಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ಅತಿಯಾದ ಕಾಫಿ, ಟೀ ಸೇವನೆ ಒಳ್ಳೆಯದಲ್ಲ. ಆಹಾರ ಸೇವನೆಯಲ್ಲಿ ಉಪ್ಪಿನ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡಿದಷ್ಟು ಒಳ್ಳೆಯದಾಗುತ್ತದೆ.

Be the first to comment

Leave a Reply

Your email address will not be published.


*