ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರು ಹಿತವರು?

ರಾಜ್ಯದ್ಯಾಂತ ಚುನಾವಣಾ ಕಾವು ಏರುತ್ತಿದೆ ಬಿಜೆಪಿ ಯಡಿಯೂರಪ್ಪನವರ ನೇತ್ರತ್ವದಲ್ಲಿ ಪರಿವರ್ತನಾ ಯಾತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ಇದೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯು ತನ್ನ ಸರ್ಕಾರದ ಸಾಧನಾ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಕೂಡ ಪಕ್ಷ ಬಲವರ್ದನೆಗಾಗಿ ತಾನು ಈಗಾಗಲೇ ಒಂದು ಸುತ್ತಿನ ಯಾತ್ರೆಯನ್ನು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮುಗಿಸಿ ಬಂದಿದೆ. ಅಂತು ಇಂತು ಕಾಂಗ್ರೆಸ್ ಹಾಗೂ ಬಿಜೆಪಿ ಗೆಲುವು ನಮ್ಮದೆ ಅಂತ ಬೀಗುತ್ತಿದೆ ಈ ನಡುವೆ ಜೆಡಿಎಸ್ ಯಾವುದೇ ಪಕ್ಷ ನಮ್ಮ ಸಹಾಯವಿಲ್ಲದೆ ಸರ್ಕಾರ ನಡೆಸಲು ಸಾದ್ಯವಿಲ್ಲ ಎಂದು ಹೇಳಿಕೊಳ್ಳುತ್ತಿದೆ. ಮತದಾರ ಪ್ರಭು ತನ್ನ ನಡೆಯನ್ನು ತನ್ನ ಮನಸ್ಸಿನಲ್ಲಿ ನಿರ್ದರಿಸಿ ರಹಸ್ಯವನ್ನು ತನ್ನೊಡಳಲ್ಲಿ ಬಚ್ಚಿಟ್ಟಿದ್ದಾನೆ. ಕರಾವಳಿಯಲ್ಲಿ ಅದರಲ್ಲೂ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಬಿಜೆಪಿ ಜಿದ್ದಾ ಜಿದ್ದಿನ ಸಿದ್ದತೆ ಮಾಡಿಕೊಂಡಿದೆ. ಕಮಲಪಾಲಯದಲ್ಲಿ ಈಗಾಗಲೇ ವಿಸ್ತಾರಕ ಯೋಜನೆಯ ಮೂಲಕ ಮನೆ ಮನೆಗೆ ತೆರಳಿ ಕೇಂದ್ರದ ಯೋಜನೆಗಳ ಬಗ್ಗೆ ಹಾಗು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನತೆಗೆ ತಿಳಿಸಿದರೆ ಇತ್ತ ಕಾಂಗ್ರೆಸ್ ಕೂಡಾ ಮನೆ ಮನೆಗೆ ಕಾಂಗ್ರೆಸ್ ಎಂಬ ಘೋಷಣೆಯೊಂದಿಗೆ ತೆರಳಿ ಸಿದ್ದ ರಾಮಯ್ಯ ನೇತ್ರತ್ವದ ಸಾಧನೆಯನ್ನು ತಿಳಿಸಿ ಬಂದಿದೆ. ಇತ್ತೀಚೆಗೆ ಸಾವಿಗೀಡಾದ ಶರತ್ ಮಡಿವಾಳ, ಅಶ್ರಫ್ ಕಲಾಯಿ, ಜಲೀಲ್ ಕರೋಪ್ಪಾಡಿ ಹತ್ಯೆಯ ಕುರಿತಾಗಿ ಎಲ್ಲಾ ರಾಜಕೀಯ ಪಕ್ಷಗಳು ಪರಸ್ಪರ ಕೇಸರೆರೆಚಾಟ ನಡೆಸಿ,ಅರೋಪ ಪ್ರತ್ಯಾರೋಪ ನಡೆಸಿ ದ.ಕ ಜೆಲ್ಲೆಯ ಬಗ್ಗೆ ವರ್ಣರಂಜಿತವಾದ ಸುದ್ದಿಯನ್ನು ರಾಜ್ಯದ ಮಾದ್ಯಮಗಳಲ್ಲಿ ಹರಡಿ ಜಿಲ್ಲೆಯ ಮಾನ ಮರ್ಯಾದೆ ಹರಾಜು ಮಾಡುವಲ್ಲಿ ಯಶಸ್ವಿಯಾಗಿದೆ. ಇದೀಗ ಈ ಹಿಂಸಾಚಾರದ ಲಾಭವನ್ನು ಪಡೆಯಲು ರಾಜಕೀಯ ಪಕ್ಷಗಳು ಭಕ ಪಕ್ಷಿಯಂತೆ ಕಾಯುತ್ತಿದೆ ಇದರಿಂದ ಯಾರಿಗೆ ಲಾಭವಾಗಲಿದೆಯೊ? ಮುಂದಿನ ಚುನಾವಣೆಯಲ್ಲಿ ಜನ ನಿರ್ದರಿಸಲಿದ್ದಾರೆ.


ಕರಾವಳಿಯಲ್ಲಿ ಕೊಲೆ,ಮರ್ಡರ್, ಗ್ಯಾಂಗ್ ವಾರ್, ಮಾದಕ ವ್ಯಸನ… ಇವೆಲ್ಲ ಸರ್ವೆ ಸಾಮಾನ್ಯ ಇದಕ್ಕೆ ಕಡಿವಾಣ ಹಾಕಲು ಸರಕಾರಿ ಅಧಿಕಾರಿಗಳು ಎಲ್ಲಾ ಪ್ರಾಮಾಣಿಕ ಪ್ರಯತ್ನ ನಡೆಸಿದರೂ ಸಮರ್ಪಕವಾಗಿ ಮಟ್ಟ ಹಾಕಲು ಸಾಧ್ಯವೇ ಆಗಿಲ್ಲ ಇದೀಗ ಇಂತಹಾ ಘಟನೆಗಳು ಸರ್ವೆ ಸಾಮಾನ್ಯ ಅಂತ ಜನರಾಡಿಕೊಳ್ಳುವ ಮಟ್ಟಕ್ಕೆ ಈ ಅಪರಾಧ ಕೃತ್ಯಗಳು ಬೆಳೆದು ನಿಂತಿದೆ.ಆದರೆ ಕರಾವಳಿಯ ಜನತೆಯಲ್ಲಿ ಆಘಾತ ಹಾಗೂ ಭಯ ಹುಟ್ಟಿಸುವ ಏಕೈಕ ಸಂಗತಿ ಏನಂದರೆ ಅದು ಕೋಮುಗಲಭೆ.ಇದರ ಕಿಡಿ ಒಮ್ಮೆ ಹತ್ತಿದರೆ ಇದನ್ನು ಅಷ್ಟು ಬೇಗ ನಂದಿಸಲು ಸಾಧ್ಯವಿಲ್ಲ. ಅದರ ಕೆನ್ನಾಲಿಗೆಗೆ ಮನುಷ್ಯ ಜೀವನ ಬಲಿಯಾಗಿ ಜಿಲ್ಲೆಯ ಜನತೆಯ ನೆಮ್ಮದಿಯನ್ನು ಬಲಿ ಪಡೆದು ಕೊಂಡ ನಂತರವೇ ಕರಾವಳಿ ಶಾಂತವಾಗುವುದು.
ಕೋಮು ಗಲಭೆಗೆ ಪ್ರಚೋದನೆ ನೀಡುವ ಅಥವಾ ಇದರ ಹೆಸರಲ್ಲಿ ರಾಜಕೀಯ ಲಾಭ ಪಡೆಯಲು ಹವಣಿಸುವ ಯಾವ ರಾಜಕಾರಣಿಗಳ ಕುಟುಂಬವೂ ಇದಕ್ಜೆ ಬಲಿಯಾಗುವುದಿಲ್ಲ.ಬದಲಾಗಿ ಜೀವಮಾನದಲ್ಲಿ ಯಾರನ್ನೂ ನೋಯಿಸದ ಅಮಾಯಕ ಯುವಕರೇ‌ ಬಲಿಯಾಗುತ್ತಾರೆ.ಇವರ ಕುಟುಂಬದ ದುಖ ದುಮ್ಮಾನವನ್ನು ಅರಿಯುವ ಶಕ್ತಿ ಈ ರಾಜಕಾರಣಿಗಳಿಗೆ ಇರಬೇಕಲ್ಲವೇ? ಸಮೀಕ್ಷೆಗಳು ಕರಾವಳಿಯಲ್ಲಿ ಬಿಜೆಪಿ ಯದ್ದೆ ಮೇಲುಗೈ ಎಂದು ಹೇಳಿದ್ದರೂ ಕಾಂಗ್ರೆಸ್ ಇದನ್ನು ಒಪ್ಪಲು ಸಿದ್ಧವಿಲ್ಲ.ಜಿಲ್ಲೆಯ ಸಚಿವದ್ವಯರಾದ ರಮಾನಾಥ ರೈ ಹಾಗೂ ಯು ಟಿ ಖಾದರ್ ಶತಾಯುಗತಾಯ ಕಾಂಗ್ರೆಸನ್ನು ಗೆಲ್ಲಿಸಿಯೆ ಸಿದ್ದ ಎಂದು ಕಾಲಿಗೆ ಚಕ್ರ ಕಟ್ಟಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಇತ್ತ ಬಿಜೆಪಿಯವರು ನಿರಂತರ ಸಭೆ ,ಸಮಾರಂಭ ಸೇರಿದಂತೆ ಬೂತ್ ಮಟ್ಟದ ಸಶಸ್ತ್ರಿ ಕರಣದತ್ತ ಗಮನ ಹರಿಸಿದೆ. ಸುಳ್ಯದ ಓರ್ವ ಶಾಸಕ ಅಂಗಾರ ಹಾಗೂ ಸಂಸದ ನಳಿನ್ ಕುಮಾರ ಕಟೀಲ್ ಬಿಟ್ಟರೆ ಬಿಜೆಪಿ ಗೆ ದೊಡ್ಡ ಜನ ಪ್ರತಿನಿಧಿಗಳ ಕೊರತೆ ಇದ್ದರೂ ಕಾರ್ಯಕರ್ತರ ಉತ್ಸಾಹ ಕ್ಕೆ ಯಾವುದೇ ಕುಂದುಂಟಾಗಿಲ್ಲ.ಅಂತೂ ಇಂತೂ ಎರಡು ಪ್ರಮುಖ ಪಕ್ಷಗಳು ಮೃತರ ಮನೆಗೆ ಪಟಾಲಮ್ ಸಹಿತ ಹೋಗಿ ಫೋಟೋಗಳಿಗೆ ಪೋಸ್ ನೀಡಿ,ಸಾಂತ್ವನ ಹೇಳಿ ಧನ ಸಹಾಯ ಮಾಡಿದರೆ ಮುಗೀತು.ಇಂತಹ ಅವಕಾಶಕ್ಕಾಗಿ ಕಾಯುವ ರಾಜಕಾರಣಿಗಳಿಗೆ ಧಿಕ್ಕಾರ ಎಂದೇ ಹೇಳಬೇಕಾಗುತ್ತದೆ. ಇದೀಗ ಕರಾವಳಿಯ ಅರಬ್ಬೀ ಸಮುದ್ರ ಶಾಂತವಾಗಿದೆ.ಚುನಾವಣೆ ತನಕ ಹೀಗೆ ಮುಂದುವರಿದರೆ ಸಾಕು ಎಂಬುದು ಇಲ್ಲಿಯ ಜನರ ಮನದ ಅಭಿಲಾಶೆ, ಕೋಮುಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನಕ್ಕೆ ಇನ್ನು ಇಲ್ಲಿ ಫಲ ಸಿಗದು. ಬಿಜೆಪಿ ಹಿಂದುತ್ವಕ್ಕೆ ಹೆಚ್ಚಿನ ಒತ್ತನ್ನೂ ನೀಡಿದರೂ, ಅಭಿವೃದ್ಧಿಯ ವಿಚಾರವನ್ನು ಕೈಗೆತ್ತಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಕಳೆದ ನಾಲ್ಕೂವರೆ ವರ್ಷಗಳ ಅಭಿವೃದ್ಧಿ,ಸಾಧನೆಯ ಪಟ್ಟಿಯನ್ನು ಹಿಡಿದು ಪ್ರಚಾರದಲ್ಲಿ ನಿರತರಾಗಿದೆ.ಈ ಮದ್ಯೆ ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತರಾದ ಕೇಂದ್ರ ಸಚಿವ ಅನಂತ ಕುಮಾರ ಹೆಗ್ಡೆಯವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಿದಾಡುತ್ತಿದ್ದು ಅವರ ಬೆಂಬಲಿಗರು ಸಂತುಷ್ಟರಾಗಿದ್ದರೆ, ಜಾತ್ಯತೀತ ಪಕ್ಷದವರು ಇದರ ಲಾಭವನ್ನು ಪಡೆಯಲು ಎಲ್ಲ ಕಸರತ್ತು ನಡೆಸಿದ್ದಾರೆ. ಇದರಿಂದ ಬಿಜೆಪಿ ಗೆ ಲಾಭಕ್ಕಿಂತ ನಷ್ಟವೇ ಅಧಿಕ ಎಂಬುದನ್ನು ಸ್ವತಃ ಬಿಜೆಪಿಯ ನಾಯಕರೇ ಹೇಳುತ್ತಿದ್ದಾರೆ.ಅನಂತ ಕುಮಾರ ಹೆಗ್ಡೆ ಹಾಗೂ ಸಂಸದ ಪ್ರತಾಪ ಸಿಂಹ ರವರು ಸ್ವಲ್ಪ ದುಡುಕು ಸ್ವಭಾವದವರು. ಇವರ ಹೇಳಿಕೆಗಳು ಪಕ್ಷದ ಅಧಿಕೃತ ಹೇಳಿಕೆಯಲ್ಲ ಎಂದು ಖುದ್ದಾಗಿ ಸ್ವತಃ ಪಕ್ಷದ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರೇ ಹೇಳಿಕೆ ನೀಡಬೇಕಾದ ಪ್ರಸಂಗ ಎದುರಾಗಿದ್ದು ಎಲ್ಲರು ಗಮನಿಸಿರಬಹುದು ಇಂತಹ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಹಾಗೂ ವಾತಾವರಣ ತಿಳಿಗೊಳಿಸುವ ಸಲುವಾಗಿ ಬಿಜೆಪಿ ಈ ಬಾರಿ ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ. ಇದರಿಂದ ಬಿಜೆಪಿಯ ಸೌಮ್ಯವಾದಿ ಅಭ್ಯರ್ಥಿಗಳು ಸ್ಪರ್ಧೆ ಮಾಡುವಲ್ಲಿ ಅಲ್ಪಸಂಖ್ಯಾತರು ಕೊಂಚ ಪ್ರಮಾಣದಲ್ಲಿ ಬೆಂಬಲಿಸಿದರೂ ಸಣ್ಣ ಪ್ರಮಾಣದ ಸೋಲಿನಿಂದ ಪಾರಾಗುವ ಅವಕಾಶವಿದೆ ಎಂದು ನಂಬಲಾಗುತ್ತದೆ.ಈ ರೀತಿ ಹೇಳಿಕೆ ನೀಡಿದ ಅನಂತಕುಮಾರ್ ಹೆಗಡೆಯವರಿಗೆ ಸ್ವತಃ ಸ್ವಪಕ್ಷಿಯವರೇ ವಿರೋಧ ವ್ಯಕ್ತಪಡಿಸಿದ್ದರಿಂದ ಲೋಕ ಸಭೆಯಲ್ಲಿ ಸ್ವತಃ ಕ್ಷಮೆ ಕೇಳುವ ಮೂಲಕ ವಿವಾದವನ್ನು ಕೊನೆಗಣಿಸಲಾಗಿದೆಯಾದರೂ ಜಾತ್ಯಾತಿತವಾದಿಗಳ ಕೋಪ ಇನ್ನು ಶಮನಗೊಂಡಿಲ್ಲ. ಇದಕ್ಕೆ ತೇಪೆ ಹಚ್ಚುವ ಪ್ರಯತ್ನ ಯುವ ಬ್ರಿಗೇಡಿನ ಮಾರ್ಗದಶಕ ಚಕ್ರವರ್ತಿ ಸೂಲಿಬೆಲೆ ರವರ ಮುಖಾಂತರ ಮಾಡಲಾಗುತ್ತಿದೆ. ವಿವಾದಾತ್ಮಕ ಹೇಳಿಕೆಗಳನ್ನು ನಿಲ್ಲಿಸಿ ಅಭಿವೃದ್ಧಿ ಕಡೆಗೆ ಗಮನ ಕೊಡಿ ಎಂದು ಬಹಿರಂಗವಾಗಿ ಸವಾಲು ಹಾಕಿದ ಚಕ್ರವರ್ತಿ ಸೂಲಿಬೆಲೆ ರವರ ದಿಟ್ಟತನದ ಹೇಳಿಕೆಯಿಂದ ಕಟ್ಟರ್ ಹಿಂದುತ್ವವಾದಿಗಳು ಸ್ವಲ್ಪ ಗುರ್ರ್ ಎಂದರೂ ಚಕ್ರವರ್ತಿಯ ಈ ಹಿಂದಿನ ರಾಷ್ಟ್ರ ಅಭಿಮಾನ ತುಂಬಿಸುವ ಮಾತುಗಳನ್ನು ಮೆಲಕುಹಾಕಿ ಶಾಂತರಾಗಿದ್ದಾರೆ ಹಾಗೂ ತಮ್ಮಷ್ಟಕ್ಕೆ ತಾವೇ ಸಮಾಧಾನ ಮಾಡಿಕೊಂಡಿದ್ದಾರೆ. ಇತ್ತ ಗುಜರಾತಿನಲ್ಲಿ ಮುಸ್ಲಿಂ ಓಲೈಕೆಯನ್ನು ಕೈ ಬಿಟ್ಟು ಮೃದು ಹಿಂದುತ್ವ ಅಸ್ತ್ರ ಹಿಡಿದು ಮಠ ಮಂದಿರಗಳಿಗೆ ಭೇಟಿ ನೀಡುವ ಮೂಲಕ ಕಾಂಗ್ರೆಸ್ ಗೆ ಹೆಚ್ಚಿನ ಬಲವನ್ನು ನೀಡಿದ ತನ್ನ ತಂತ್ರಗಾರಿಕೆಯನ್ನು ಕರ್ನಾಟಕದಲ್ಲೂ ಮುಂದುವರೆಸುವ ತೀರ್ಮಾನಕ್ಕೆ ಬಂದಿರುವ AICC ಅಧ್ಯಕ್ಷ ರಾಹುಲ್ ಗಾಂಧಿಯವರು ಕರ್ನಾಟಕದಲ್ಲೂ ಈ ಬಾರಿ ಮುಸ್ಲಿಂಮರ ಮದ್ಯೆ ಅಂತರ ಕಾಯ್ದುಕೊಳ್ಳುವ ಮೂಲಕ ಮೃದು ಹಿಂದುತ್ವಕ್ಕೆ ಒತ್ತು ನೀಡಲು ರಾಜ್ಯದ ಕಾಂಗ್ರೆಸ್ ಗೆ ಮಾರ್ಗದರ್ಶನ ನೀಡಿದ್ದಾರೆ. ಈ ಕಾರಣಕ್ಕಾಗಿ ಮುಂದಿನ ತಿಂಗಳ ರಾಹುಲ್ ಗಾಂಧಿಯವರ ಬೇಟೆಯ ಸಂದರ್ಭದಲ್ಲಿ ರಾಜ್ಯದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುವಂತೆ ರಾಜ್ಯ ಉಸ್ತುವಾರಿಗಳಾದ ವೇಣುಗೋಪಾಲ ರವರು ಕಾರ್ಯ ಯೋಜನೆ ಸಿದಪಡಿಸಿದ್ದರೆ, ಇತ್ತ ಇದಕ್ಕೆ ಪ್ರತಿತಂತ್ರವಾಗಿ ಬಿಜೆಪಿಯವರು ತನ್ನ ತಂತ್ರವನ್ನು ಹೆಣೆಯುತ್ತಿದೆ. ಬಂಟ್ವಾಳದಲ್ಲಿ ಈ ಮುಂಬರುವ ಚುನಾವಣೆ ಕಾಂಗ್ರೆಸ್ ಗೆ ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದು, ರಮಾನಾಥ ರೈಯವರು ಮತ್ತೊಮ್ಮೆ ಗೆಲ್ಲುವ ನಿರೀಕ್ಷೆ ಯಲ್ಲಿದ್ದಾರೆ.ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಂಟ್ವಾಳದಲ್ಲಿ ಅತೀ ಹೆಚ್ಚು ಅಭಿವೃದ್ಧಿ ನಡೆದಿದೆ ಎಂಬುದನ್ನು ಒಪ್ಪಿ ಕೊಳ್ಳಲೆ ಬೇಕಾಗಿದೆ.ಕಳೆದ ಬಾರಿ 6000 ಮತಗಳ ಅಂತರದಲ್ಲಿ ಸೋತ ಬಿಜೆಪಿ ಕಾಂಗ್ರೆಸ್ ಗೆ ಪ್ರತಿಸ್ಪರ್ದೆ ಯನ್ನು ನೀಡಲು ಸಜ್ಜಾಗಿದೆ.ಈ ಬಾರಿ ಸಚಿವ ರೈ ಗೆದ್ದರೆ ಜಿಲ್ಲೆಯ ಮಟ್ಟಿಗೆ ದಾಖಲೆಯನ್ನೇ ನಿರ್ಮಿಸಿದಂತೆ.
ಇನ್ನು ಚುನಾವಣೆ ಹತ್ತಿರ ಬರುವಾಗ ಪಕ್ಷ ದಿಂದ‌ ಪಕ್ಷಕ್ಕೆ ತಿಪ್ಪರಲಾಗ ಪ್ರಾರಂಭವಾಗಲಿದೆ.ಇದು ಆಯಾಯ ಪಕ್ಷಕ್ಕೆ ಎಷ್ಟು ಅನುಕೂಲ ವಾಗಲಿದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ.ತೃತೀಯ ಪಕ್ಷ ವಾಗಿ ಜೆಡಿಎಸ್ ಇಲ್ಲಿ ಪ್ರಭಾವ ಶಾಲಿಯಾಗಿಲ್ಲ.ಆದ್ದರಿಂದ ಕರಾವಳಿಯ ಮಟ್ಟಿಗೆ ಜೆಡಿಎಸ್ ಆಟಕು೦ಟು ಲೆಕ್ಕಕ್ಕಿಲ್ಲ ಎಂಬಂತೆ ಒಣ ಪ್ರದರ್ಶನ ನಡೆಸಲಿದೆ.ಎಸ್ಡಿಪಿಐ ಕಳೆದ ವಿಧಾನ ಸಭಾ ಚುನಾವಣೆ ಯಲ್ಲಿ ಕೆಲವು ರಾಜಕೀಯ ಪಕ್ಷಗಳ ನಿದ್ದೆ ಕೆಡಿಸಿದ್ದಂತೂ ನಿಜ.ಆದರೆ ಈ ಬಾರಿಯೂ ತನ್ನ ಅಭ್ಯರ್ಥಿ ಗಳನ್ನು ಸ್ಪರ್ದೆಗಿಳಿಸುವ ಸೂಚನೆಯನ್ನು ನೀಡಿದ್ದರೂ ಕೊನೆಯ ಕ್ಷಣದಲ್ಲಿ ಇವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರೂ ಅಶ್ಚರ್ಯ ಪಡ ಬೇಕಾಗಿಲ್ಲ. ಕಾಂಗ್ರೆಸ್ ಅದ್ಯಕ್ಷ ಪರಮೇಶ್ವರ್ ಇತ್ತೀಚೆಗೆ ನೀಡಿದ ಹೇಳಿಕೆಯು ಇದಕ್ಕೆ ಪುಷ್ಟಿ ನೀಡುತ್ತದೆ.ಕರಾವಳಿಯಲ್ಲಿ ಎಸ್ಡಿಪಿಐ ಸದ್ಯಕ್ಕೆ ಬಿಜೆಪಿ ಹಾಗೂ ಕಾಂಗ್ರೆಸನ್ನು ಸಮಾನವಾಗಿ ದೂರವಿಟ್ಟಿದೆ.ಆದರೆ ರಾಜಕೀಯ ದಲ್ಲಿ ಯಾರಿಗೂ ಶಾಶ್ವತ ಮಿತ್ರರೂ ಶಾಶ್ವತ ಶತ್ರುಗಳು ಇರುವುದಿಲ್ಲ ಎಂಬ ನಾನ್ನುಡಿ ಇದೆ.ಆದ್ದರಿಂದ ಎಸ್ಡಿಪಿಐ ನಿಗೂಡತೆ ಇನ್ನೂ ಪ್ರಶ್ನಾರ್ಹವಾಗಿಯೇ ಉಳಿದಿದೆ.
ಕಾಂಗ್ರೆಸ್‌ ಗೆ 8 ರ ಪೈಕಿ 7 ಕ್ಷೇತ್ರದಲ್ಲಿ ತನ್ನದೇ ಪಕ್ಷದ ಶಾಸಕರು ಇರುವುದರಿಂದ ಅಭ್ಯರ್ಥಿ ಆಯ್ಕೆಗೆ ಯಾವುದೇ ಗೊಂದಲವಿರುವುದಿಲ್ಲ ,ಆದರೆ ಬಿಜೆಪಿ ವಲಯದಲ್ಲಿ ಒಂದೊಂದು ಕ್ಷೇತ್ರಕ್ಕೂ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಉದ್ದವಾಗುತ್ತಲೇ ಇದೆ.ತನ್ನವರು ಪ್ರಭಾವಶಾಲಿಗಳು ಎಂದು ಯಾರನ್ನೂ ಶಿಫ಼ಾರಸ್ಸು ಮಾಡುವಂತಿಲ್ಲ ಎಂಬ ಫರ್ಮಾನ್ ಅಮಿತ್ ಶಾ ಈಗಾಗಲೇ ಹೊರಡಿಸಿದ್ದಾರೆ.ಗೆಲ್ಲುವ ಕುದುರೆ ಯಾರು? ಗೆಲ್ಲುವ ಮಾನದಂಡಗಳೇನು ಎಂಬ ಬಗ್ಗೆ ಬಿಜೆಪಿಯ ಅಂತರಿಕ ಸಮೀಕ್ಷೆ ಈಗಾಗಲೇ ನಡೆದಿದೆ.ಆದ್ದರಿಂದ ಶಿಫ಼ಾರಸ್ಸು ಎಂಬ ತಲೆನೋವು ಬಿಜೆಪಿಯ ಜಿಲ್ಲಾದ್ಯಕ್ಷರಾದ ಸಂಜೀವ್ ಮಠಂದೂರ್ ಸೇರಿದಂತೆ ಜಿಲ್ಲೆಯ ನಾಯಕರಿಗೆ ಕೊಂಚ ಮಟ್ಟಿಗೆ ಕಡಿಮೆಯಾಗಿದೆ.ಬಿಜೆಪಿ ಯ ನಾಯಕರ ಒಳಜಗಳ ಒಣ ಪ್ರತಿಷ್ಟೆ ಬದಿಗಿಟ್ಟು ಚುನಾವಣೆ ಎದುರಿಸಿದರೆ ಮಾತ್ರ ಗೆಲುವನ್ನು ತನ್ನತ್ತ ಒಲಿಸಿಕೊಳ್ಲಬಹುದು.
ಒಟ್ಟಾರೆ ಚುನಾವಣೆ ಗೆ ದಿನಗಣನೆ ಪ್ರಾರಂಭವಾಗುತ್ತಿದೆ.ರಾಜಕಾರಣಿ ಗಳು ರಾಜಕೀಯ ಪಕ್ಷಗಳು ವಾದ ಪ್ರತಿವಾದಕ್ಕೆ ಅಣಿಯಾಗುತ್ತಿದೆ.ಪ್ರಜಾಪ್ರಭುತ್ವ ವ್ಯವಸ್ಥೆಗೆ, ಮಾನವೀಯ ಮೌಲ್ಯಕ್ಕೆ, ಗೌರವ ನೀಡಿ ಸತ್ಯ ನ್ಯಾಯ ನೀತಿಯಿಂದ ಕೂಡಿದ ಚುನಾವಣೆ ನಡೆಯಲಿ.ನಿರ್ಭೀತಿ ಹಾಗೂ ಮುಕ್ತ ಮನಸ್ಸಿನಿಂದ ಮಾಡುವ ಮತದಾನ ನಮ್ಮದಾಗಲಿ ಎಂಬುದೇ ಎನ್ ಎಮ್ ಸಿ ಯ ಆಶಯ


ವಿಷೇಶ ವರದಿ: ಮಂಜುಶ್ರೀ ಗೌಡ ನಾಗತೀರ್ಥ

2 Comments

  1. ಎಲ್ಲಾ ಪಕ್ಷ ಎಲ್ಲಾ ವರ್ಗ ಮೆಚ್ಚುವ ಸತ್ಯಕ್ಕೆ ಸನಿಹ ಇರುವ ವರದಿ

Leave a Reply

Your email address will not be published.


*