‘ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ, ಪ್ರತಿಭಟನೆ ಹಿಂಪಡೆಯಿರಿ’: ಆಶಾ ಕಾರ್ಯಕರ್ತೆಯರಲ್ಲಿ ಸಚಿವ ಶ್ರೀರಾಮುಲು ಮನವಿ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ತಮ್ಮ ಬೇಡಿಕೆಯನ್ನು ಸರ್ಕಾರ ಹಲವು ಸಮಯಗಳಿಂದ ಈಡೇರಿಸಿಲ್ಲ ಎಂದು ಆಕ್ಷೇಪಿಸಿ ಆಶಾ ಕಾರ್ಯಕರ್ತೆಯರು ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸುತ್ತಿರುವುದು ತೀವ್ರ ಸ್ವರೂಪ ಪಡೆಯುತ್ತಿರುವಾಗ ನಿಮ್ಮ ಬೇಡಿಕೆಗಳನ್ನು ಸರ್ಕಾರದ ಮಿತಿಯಲ್ಲಿ ಈಡೇರಿಸುತ್ತೇವೆ. ಪ್ರತಿಭಟನೆ ಹಿಂಪಡೆಯಿರಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.

ದೆಹಲಿಯಲ್ಲಿರುವ ಆರೋಗ್ಯ ಸಚಿವ ಶ್ರೀರಾಮುಲು ಮಾಧ್ಯಮಗಳ ಜೊತೆ ಮಾತನಾಡಿ, ಸರ್ಕಾರ ನಿಮ್ಮೊಂದಿಗೆ ಯಾವಾಗಲೂ ಇರುತ್ತದೆ, ಆತಂಕಪಡಬೇಡಿ, ನಿಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತದೆ. ನೀವೆಲ್ಲರೂ ನಮ್ಮ ಅಕ್ಕ, ತಂಗಿಯರಿದ್ದಂತೆ, ತುಂಬಾ ಕಷ್ಟಪಟ್ಟುಕೊಂಡು ಬಂದಿದ್ದೀರಿ. ನಿಮ್ಮ ಅಧ್ಯಕ್ಷರು ಬಂದು ಹೇಳಿದ್ದಾರೆ. ಮೂರು ದಿನಗಳ ಹಿಂದೆಯೂ ಈ ಬಗ್ಗೆ ಚರ್ಚೆಯಾಗಿದೆ. ಸರ್ಕಾರದ ಕಾರ್ಯದರ್ಶಿಗಳ ಜೊತೆಗೆ ಮಾತನಾಡಿದ್ದೇನೆ. ಆದಷ್ಟು ಬೇಗ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಬಗ್ಗೆ ಮಾತನಾಡಿ, ಪ್ರತಿ ತಿಂಗಳ 15ನೇ ತಾರೀಖಿನೊಳಗೆ ಎರಡು ತಿಂಗಳ ಸಂಬಳ ಜೊತೆಗೆ ಹಾಕಲು ಒಪ್ಪಿಗೆ ಈಗಾಗಲೇ ನೀಡಿದ್ದೇನೆ. ನೆರೆಯ ಆಂಧ್ರ ಪ್ರದೇಶ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ವೇತನ ನೀಡುತ್ತಿದೆ. ಇಲ್ಲಿ ಈ ಹಿಂದೆ 5,500 ರೂಪಾಯಿಗಳಿದ್ದು ಈಗ ಬಿಎಸ್ ವೈ ಸರ್ಕಾರ ಬಂದ ಮೇಲೆ ಅದನ್ನು 6 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ನನ್ನ ಅಧಿಕಾರದಲ್ಲಿ ಕಾರ್ಯಕರ್ತೆಯರ ವೇತನವನ್ನು 10 ಸಾವಿರಕ್ಕೆ ಹೆಚ್ಚಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ಕೊಟ್ಟರು.

Be the first to comment

Leave a Reply

Your email address will not be published.


*