ಹೈಕೋರ್ಟ್ ಮೆಟ್ಟಿಲೇರಿದ ಪ್ರಿಯಾಂಕ ರೆಡ್ಡಿ ಅತ್ಯಾಚಾರ, ಕೊಲೆ ಆರೋಪಿಗಳ ಎನ್ ಕೌಂಟರ್ – ಎನ್.ಎಂ.ಸಿ ನ್ಯೂಸ್

ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ ನಾಲ್ವರು ಆರೋಪಿಗಳು ಪೊಲೀಸರ ಎನ್ ಕೌಂಟರ್ ಗೆ ಶುಕ್ರವಾರ ಮುಂಜಾನೆ ಬಲಿಯಾಗಿದ್ದು, ಆರೋಪಿಗಳ ಶವಸಂಸ್ಕಾರಕ್ಕೆ ತೆಲಂಗಾಣ ಹೈಕೋರ್ಟ್ ತಡೆ ನೀಡಿದ್ದು, ಡಿಸೆಂಬರ್ 8ರವರೆಗೆ ಶವವನ್ನು ಸುರಕ್ಷಿತವಾಗಿಡುವಂತೆ ಪೊಲೀಸರಿಗೆ ಆದೇಶ ನೀಡಿದೆ. ಶುಕ್ರವಾರ ಮುಂಜಾನೆ ಘಟನೆ ನಡೆದ ಚಟ್ಟಾಪಲ್ಲಿ ಪ್ರದೇಶಕ್ಕೆ ಸ್ಥಳ ಮಹಜರು ನಡೆಸಲು ನಾಲ್ವರು ಆರೋಪಿಗಳನ್ನು ಕರೆದೊಯ್ದಿದ್ದ ಸಂದರ್ಭದಲ್ಲಿ ಪೊಲೀಸರ ರಿವಾಲ್ವರ್ ಕಸಿದುಕೊಂಡು ಹಲ್ಲೆ ನಡೆಸಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿತ್ತು.

ಆರೋಪಿಗಳ ಎನ್ ಕೌಂಟರ್ ಸಂಬಂಧ ದಾಖಲಾದ ಅರ್ಜಿಯ ತುರ್ತು ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್ ನ ದ್ವಿ ಸದಸ್ಯ ಪೀಠ, ಶವಗಳ ಮರಣೋತ್ತರ ಪರೀಕ್ಷೆಯ ವೀಡಿಯೋ ಮಾಡಿ ಅದನ್ನು ಶನಿವಾರ ಸಂಜೆಯೊಳಗೆ ರಿಜಿಸ್ಟ್ರಾರ್ ಗೆ ಸಲ್ಲಿಸಬೇಕೆಂದು ಸೂಚಿಸಿದೆ. ಆರೋಪಿಗಳ ಮರಣೋತ್ತರ ಪರೀಕ್ಷೆಯ ವೀಡಿಯೋ ಮಾಡಿ ತೆಲಂಗಾಣ ಹೈಕೋರ್ಟ್ ನ ರಿಜಿಸ್ಟ್ರಾರ್ ಜನರಲ್ ಗೆ ಶನಿವಾರ ಸಂಜೆಯೊಳಗೆ ನೀಡಬೇಕೆಂದು ಮೆಹಬೂಬನಗರ್ ಜಿಲ್ಲಾ ನ್ಯಾಯಾಧೀಶರು ಆದೇಶ ಹೊರಡಿಸಿದ್ದು, ಸೋಮವಾರ ಬೆಳಗ್ಗೆ 10.30ಕ್ಕೆ ಹೈಕೋರ್ಟ್ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ವರದಿ ತಿಳಿಸಿದೆ.

Be the first to comment

Leave a Reply

Your email address will not be published.


*