ಉಪ ಚುನಾವಣೆಯಲ್ಲಿ ಕಾಂಗ್ರೆಸ್ 9 ಸ್ಥಾನ ಗೆಲ್ಲಲಿದೆ, ಮತ್ತೆ ಮಧ್ಯಂತರ ಚುನಾವಣೆ ಎದುರಾಗಲಿದೆ; ಆರ್.ವಿ. ದೇಶಪಾಂಡೆ – ಎನ್.ಎಂ.ಸಿ ನ್ಯೂಸ್ 

ಕರ್ನಾಟಕ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳ ಪೈಕಿ ಕನಿಷ್ಟ 9 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿ ಬಹುಮತ ಕಳೆದುಕೊಂಡರೆ ರಾಜ್ಯದಲ್ಲಿ ಮತ್ತೆ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಭವಿಷ್ಯ ನುಡಿದಿದ್ದಾರೆ.

ರಾಜ್ಯ ಉಪ ಚುನಾವಣಾ ಫಲಿತಾಂಶದ ಕುರಿತು ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತನಾಡಿರುವ ಆರ್.ವಿ. ದೇಶಪಾಂಡೆ, ‘ಪ್ರವಾಹ ಪರಿಸ್ಥಿತಿಯನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ. ಹೀಗಾಗಿ ಜನ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಇದಲ್ಲದೆ, ಜನ ಪಕ್ಷಾಂತರಿಗಳ ವಿರುದ್ಧ ಭ್ರಮನಿರಸನಗೊಂಡಿದ್ದಾರೆ. ಈ ಹಿಂದೆ ಅನೇಕ ಬಾರಿ ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ನಡೆದಿದೆ. ಆದರೆ, ಈ ರೀತಿ ದುಡ್ಡಿಗಾಗಿ ಮಂತ್ರಿ ಸ್ಥಾನಕ್ಕಾಗಿ ಪಕ್ಷಾಂತರ ಆಗಿರಲಿಲ್ಲ. ಪರಿಣಾಮ ಪಕ್ಷಾಂತರಿಗಳ ವಿರುದ್ಧದ ಗಾಳಿ ರಾಜ್ಯದಲ್ಲಿದೆ. ಹೀಗಾಗಿ ಕಾಂಗ್ರೆಸ್ ಯಲ್ಲಾಪುರ ಸೇರಿದಂತೆ ಕನಿಷ್ಟ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೆಯ ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಕುರಿತು ಮಾತನಾಡಿರುವ ಅವರು, ‘ಜೆಡಿಎಸ್ ಪಕ್ಷದ ಜೊತೆಗಿನ ಮರು ಮೈತ್ರಿಯ ಬಗ್ಗೆ ನನಗೆ ಗೊತ್ತಿಲ್ಲ. ಈ ಕುರಿತು ಯಾರೂ ನನ್ನ ಜೊತೆ ಚರ್ಚೆ ನಡೆಸಿಲ್ಲ. ಒಂದು ವೇಳೆ ಚುನಾವಣೆಯ ನಂತರ ಬಿಜೆಪಿ ಬಹುಮತ ಕಳೆದುಕೊಂಡರೆ ಮಧ್ಯಂತರ ಚುನಾವಣೆಯನ್ನು ಎದುರಿಸುವುದು ಸೂಕ್ತ. ಭವಿಷ್ಯದಲ್ಲಿ ನಮಗೆ ಬಹುಮತ ಬಂದರೆ ನಾವು ಜವಾಬ್ದಾರಿಯುತ ಸರ್ಕಾರ ರಚನೆ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*