ಉಪಚುನಾವಣಾ ಸಮರ: ನಾಮಪತ್ರ ಸಲ್ಲಿಕೆಯಿಂದ ದೂರ ಉಳಿದ ಕಾಂಗ್ರೆಸ್ ಮುಖಂಡರು – ಎನ್.ಎಂ.ಸಿ ನ್ಯೂಸ್

ಡಿ.5ರಂದು ನಡೆಯಲಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಸೋಮವಾರ ತೆರೆ ಬಿದ್ದಿದೆ. ಆಡಳಿತಾರೂಢ ಮತ್ತು ಪ್ರತಿಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದರು. ಆದರೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕೇಂದ್ರ ಹಾಗೂ ರಾಜ್ಯ ಸಚಿವರು ಸೇರಿದಂತೆ ಹಲವು ನಾಯಕರು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಿಂದ ದೂರ ಉಳಿದಿರುವುದು ಕಂಡು ಬಂದಿದೆ. ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ.ಪರಮೇಶ್ವರ್, ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ, ವೀರಪ್ಪ ಮೊಯ್ಲಿ, ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಈ ನಾಯಕರು ಉಪಚುನಾವಣೆ ಬಗ್ಗೆ ಯಾವುದೇ ಮಾತುಗಳನ್ನೂ ಆಡುತ್ತಿಲ್ಲ. ಇನ್ನು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ. ದಿನೇಶ್ ಗುಂಡೂರಾವ್, ಡಿಕೆ.ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡ ಅವರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸಾಥ್ ನೀಡಿದರು.

ಚುನಾವಣೆಗೂ ಮುನ್ನವೇ ಪಕ್ಷ ಭರವಸೆಯನ್ನು ಕಳೆದುಕೊಂಡಿದೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ. ಪಕ್ಷದ 14 ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೆಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಪಕ್ಷದಲ್ಲಿ ಅಂತಹ ದೊಡ್ಡ ನಾಯಕರಾರೂ ಇಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅಂತೆಯೇ ಬಿಜೆಪಿಯಲ್ಲೂ ಇಂತಹದ್ದೇ ಸಮಸ್ಯೆಯಿದೆ. ಆದರೂ, ಅವರು ಅವರ ಉನ್ನತ ನಾಯಕರ ಮಾತುಗಳನ್ನು ಕೇಳುತ್ತಿದ್ದಾರೆ. ಆದರೆ, ನಮ್ಮಲ್ಲಿ ಅಂತಹ ಶಿಸ್ತುಗಳಿಲ್ಲ. ಇದು ಚುನಾವಣೆ ಮೇಲೆ ಬಲವಾದ ಪರಿಣಾಮ ಬೀರಲಿದೆ. ಪರಮೇಶ್ವರ್ ಅವರಂತಹ ನಾಯಕರು ಚುನಾವಣೆಯಿಂದ ದೂರ ಉಳಿದಿದ್ದಾರೆಂದು ಕಾಂಗ್ರೆಸ್ ಹಿರಿಯ ನಾಯಕ ಹೇಳಿದ್ದಾರೆ.

 

Be the first to comment

Leave a Reply

Your email address will not be published.


*