ಸ್ಯಾಮ್ ಪೀಟರ್ ಪ್ರಕರಣದಲ್ಲಿ ಕಾಶಿ ಮಠದ ಪದಚ್ಯುತ ಸ್ವಾಮಿ ರಾಘವೇಂದ್ರ ತೀರ್ಥ ಆರೋಪಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

ಮಂಗಳೂರು : ಕದ್ರಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕುಖ್ಯಾತ ಆರೋಪಿ,ಕೇರಳ ಮೂಲದ ಸ್ಯಾಮ್ ಪೀಟರ್,ಮಂಗಳೂರಿನ ಗೌಡ ಸಾರಸ್ವತ ಸಮಾಜ(ಜಿಎಸ್‍ಬಿ)ದ ಪ್ರತಿಷ್ಠಿತ ವ್ಯಕ್ತಿಗಳ ಹತ್ಯೆಗೆ ಅಥವಾ ಅಪಹರಣಕ್ಕೆ ಸಂಚು ರೂಪಿಸಿದ್ದಾನೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಮಂಗಳೂರಿನ ಕದ್ರಿ ಪೊಲೀಸರು ಬಂಧಿಸಿದ  ಸ್ಯಾಮ್ ಪೀಟರ್ ಪ್ರಕರಣದಲ್ಲಿ ಕಾಶಿ ಮಠದ ಪದಚ್ಯುತ ಸ್ವಾಮಿಯಾದ ರಾಘವೇಂದ್ರ ತೀರ್ಥ ಅಲಿಯಾಸ್ ಶಿವಾನಂದ ಪೈ ಎಂಬ ವ್ಯಕ್ತಿಯನ್ನು ಆರೋಪಿ ಸ್ಯಾಮ್ ಪೀಟರ್ ನೀಡಿದ ಸ್ವ ಇಚ್ಛಾ ಹೇಳಿಕೆ ಪ್ರಕಾರ ಪ್ರಕರಣದಲ್ಲಿ ಆರೋಪಿಸಲಾಗಿದ್ದು,  ಸ್ಯಾಮ್ ಪೀಟರ್ ಸಹಿತ 14 ಮಂದಿಯನ್ನು ಕದ್ರಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್ ಶೀಟ್ನಲ್ಲಿ ದಾಖಲಿಸಿದ್ದಾರೆ. ಈ ಹಿಂದೆ ಕದ್ರಿ ಪೊಲೀಸರು ಕೇರಳದ ಎಲಮಕ್ಕರದಲ್ಲಿ ವಾಸಿಸುತ್ತಿದ್ದ ಪದಚ್ಯುತ ಸ್ವಾಮಿಯಾದ ರಾಘವೇಂದ್ರ ತೀರ್ಥರಿಗೆ ನೋಟೀಸು ನೀಡಿ ಹೇಳಿಕೆಯನ್ನು ದಾಖಲಿಸಿದ್ದರು. ಜಿಎಸ್‍ಬಿ ಸಮಾಜದ ಇಬ್ಬರು ಸ್ವಾಮೀಜಿಗಳ ನಡುವೆ ತಲೆದೋರಿರುವ ವಿವಾದವನ್ನು ಬಗೆಹರಿಸಿಕೊಡಲು ಆರೋಪಿ ಸ್ಯಾಮ್ ಪೀಟರ್ ಕ್ರಿಮಿನಲ್ ಸಂಚು ರೂಪಿಸಿದ್ದ ಎಂಬುದು ಪೇಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಉಡುಪಿಯ ಕಲ್ಪನಾ ರೆಸಿಡೆನ್ಸಿ ಮಾಲಕ ರಾಮಚಂದ್ರ ನಾಯಕ್ ಎಂಬವರ ಮೂಲಕ ಜಿಎಸ್‍ಬಿ ಪರಿತ್ಯಕ್ತ  ಸ್ವಾಮೀಜಿಯೊಬ್ಬರನ್ನು ಸಂಪರ್ಕಿಸಿದ್ದ ಸ್ಯಾಮ್ ಪೀಟರ್, ಮಠದ ಆಸ್ತಿ ವಿವಾದವನ್ನು ಬಗೆಹರಿಸಿಕೊಡಲು ಹದಿನೈದು ಲಕ್ಷ ರೂ.ಗಳ ಮುಂಗಡ ಹಣ ಪಡೆದಿದ್ದ ಎಂಬುದು ಪೊಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಜಿಎಸ್‍ಬಿ ಸಮಾಜದ ಗೌರವಾನ್ವಿತ ಸ್ವಾಮೀಜಿಗಳಾದ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರನ್ನು ಬ್ಲಾಕ್‍ಮೇಲ್ ಮೂಲಕ ಬೆದರಿಸಲು ಅಥವಾ ಸ್ವಾಮೀಜಿಯ ಅಪ್ತರ ಪೈಕಿ ಓರ್ವರನ್ನು ಅಪಹರಣ-ಹತ್ಯೆ ನಡೆಸಲು ಸ್ಯಾಮ್ ಪೀಟರ್ ಯೋಜನೆ ರೂಪಿಸಿದ್ದ ಬಗ್ಗೆ ದೊರೆತ ಮಾಹಿತಿಗಳ ಹಿನ್ನಲೆಯಲ್ಲಿ ಪೋಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಮಾಹಿತಿಯನ್ನಾಧರಿಸಿ ಜಿಎಸ್‍ಬಿ ಸಮಾಜದ ಪರಿತ್ಯಕ್ತ ಸ್ವಾಮಿಯಾದ ರಾಘವೇಂದ್ರ ತೀರ್ಥ ಸಹಿತ ಹಲವರನ್ನು ಪೊಲೀಸರು ವಿಚಾರಣೆ ನಡೆಸಿರುತ್ತಾರೆ .

ಕದ್ರಿ ಪೋಲಿಸ್ ಠಾಣೆ ಇನ್ಸ್‍ಪೆಕ್ಟರ್ ಶಾಂತರಾಮ್ ಕುಂದರ್ ನೇತೃತ್ವದ ಪೊಲೀಸ್ ತಂಡ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯೊಂದರಲ್ಲಿ ಸ್ಯಾಮ್ ಪೀಟರ್ ಸಹಿತ ಎಂಟು ಮಂದಿಯನ್ನು ಪಂಪ್‍ವೆಲ್ ಬಳಿಯ ಹೊಟೇಲ್ ಒಂದರಿಂದ ಬಂಧಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಕದ್ರಿ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಮಾರುತಿ, ಎಎಸ್‍ಐ ಧನರಾಜ್, ಹೆಡ್ ಕಾನ್ಸ್‍ಟೇಬಲ್ ಪ್ರಶಾಂತ್ ಶೆಟ್ಟಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಪೊಲೀಸ್ ಕಮೀಷನರ್ ಪಿ.ಎಸ್.ಹರ್ಷ ನಿರ್ದೇಶನದಲ್ಲಿ ಡಿಸಿಪಿಗಳಾದ ಲಕ್ಷ್ಮೀ ಗಣೇಶ್, ಅರುಣಾಂಕ್ಷುಗಿರಿ ಮತ್ತು ಇನ್ಸ್‍ಪೆಕ್ಟರ್ ಶಾಂತರಾಮ್ ವಿಚಾರಣೆ ಮುಂದುವರಿಸಿದ್ದಾರೆ.

Be the first to comment

Leave a Reply

Your email address will not be published.


*