ಕನ್ನಡಿಗರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಬೈಂದೂರು ಸುಬ್ರಹ್ಮಣ್ಯ ಹೆಬ್ಬಾಗಿಲು

ಕನ್ನಡದ ಕಂಪನ್ನು ಅರಬ್ ದೇಶದಲ್ಲಿ ಪಸರಿಸಿದ ಕೀರ್ತಿ ಸುಬ್ರಹ್ಮಣ್ಯ ಹೆಬ್ಬಾಗಿಲು ಮಡಿಲಿಗೆ ಸೇರುತ್ತದೆ ಕಳೆದ ೧೩ ವರ್ಷಗಳಿಂದ ಕತಾರ್ ನೆಲದಲ್ಲಿ ನೆಲೆಸಿರುವ ಇವರು ಇಂಡಿಯನ್ ಕಮ್ಯುನಿಟಿ ಬೆನ್ವೆಲೆಂಟ್ ಫೋರಂ ಜಾಯಿಂಟ್ ಸೆಕ್ರೆಟರಿಯಾಗಿ ಆಯ್ಕೆಯಾಗಿ ತಮ್ಮ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.ಅಂದಹಾಗೆ ಕನ್ನಡದ ಸಿನಿಮಾಗಳಾದ ಒಂದು ಮೊಟ್ಟೆಯ ಕಥೆ, ಕಾಫಿತೋಟ,ಕೋಟಿಗೊಬ್ಬ -೨, ಹೆಬ್ಬುಲಿ, ಕಿರಿಕ್ ಪಾರ್ಟಿ, ದೊಡ್ಮನೆ ಹುಡುಗ, ಚೌಕ, ರಾಜಕುಮಾರ, ಮಾಸ್‌ಲೀಡರ್, ರಂಗಿತರಂಗ,ರುಸ್ತುಂ, ಹೀಗೆ ಹಲವು ಕನ್ನಡ ಸಿನಿಮಾಗಳ ಜೊತೆ ಗಿರಿಗಿಟ್ ತುಳು ಸಿನಿಮಾವನ್ನು ಅರಬ್ ದೇಶದಲ್ಲಿ ತೆರೆಕಾಣುವಂತೆ ಮಾಡಿದ್ದು ಬೈಂದೂರಿನ ಸುಬ್ರಹ್ಮಣ್ಯ ಹೆಬ್ಬಾಗಿಲು. ಇದರ ಜೊತೆಯಲ್ಲಿ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದ ದೀಪವೇ ನಿನ್ನ ಕಣ್ಣು ಎಂಬ ಹಾಡಿನ ಚಿತ್ರೀಕರಣದ ಸಂಪೂರ್ಣ ಜವಬ್ದಾರಿಯನ್ನು ಇದೇ ಬೈಂದೂರು ಸುಬ್ರಹ್ಮಣ್ಯ ಹೆಬ್ಬಾಗಿಲು ವಹಿಸಿಕೊಂಡಿದ್ದು ಈ ಹಾಡು ಕತಾರ್‌ನ ಪ್ರವಾಸೋದ್ಯಮ ಇಲಾಖೆಯ ಹಾಗೂ ಭಾರತೀಯ ದೂತವಾಸ ಕೇಂದ್ರದ ಪ್ರಶಂಸೆಗೆ ಭಾಜನವಾಗಿದೆ. ಇಷ್ಟಕ್ಕೆ ಸುಮ್ಮನಿರದ ಸುಬ್ರಹ್ಮಣ್ಯ ಹೆಬ್ಬಾಗಿಲು ,ಕರ್ನಾಟಕ ಚಲನಚಿತ್ರಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವರನ್ನು ಕತಾರ್‌ಗೆ ಕರೆಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಹಾಗೂ ಗೌರವಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮೂಲತ: ಉಡುಪಿ ಜಿಲ್ಲೆಯ ಬೈಂದೂರಿನವರಾದ ಇವರು ಇತ್ತೀಚೆಗೆ ಕತಾರ್‌ನಲ್ಲಿ ನಡೆದಸೈಮಾ ಅವಾರ್ಡ್ ನಲ್ಲಿ ಕನ್ನಡದ ಕಲಾವಿದರು ಮತ್ತು ತಂತ್ರಜ್ಞರೊಂದಿಗೆ ಬೆರೆತು, ಅವರ ಯೋಗಕ್ಷೇಮವನ್ನು ವಿಚಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗೆ ನಾಟಕ, ಸಾಂಸ್ಕ್ರತಿಕ ಕಾರ್ಯಕ್ರಮ, ಶೈಕ್ಷಣಿಕ ಹಾಗೂ ಮನೋರಂಜನಾ ಕಾರ್ಯಕ್ರಮದ ಆಯೋಜನೆ, ವಿವಿಧ ಸಂಘ ಸಂಸ್ಥೆಗಳ ಸಮನ್ವಯತೆಯೊಂದಿಗೆ ಕಾರ್ಯಕ್ರಮ ಪ್ರಸ್ತುತಿ, ಕತಾರ್ ಚಲನಚಿತ್ರ ಬಿಡುಗಡೆ ಸೇರಿದಂತೆ ವಿವಿಧ ಗಣ್ಯರ ಕಾರ್ಯಕ್ರಮದ ಪ್ರಮುಖ ಉಸ್ತುವಾರಿ ವಹಿಸಿದ್ದಾರೆ. ಬರೀ ಮನರಂಜನೆ ಕ್ಷೇತ್ರ ಮಾತ್ರವಲ್ಲದೇ ಸುಬ್ರಹ್ಮಣ್ಯ ಹೆಬ್ಬಾಗಿಲುರವರು, ತಮ್ಮ ಸಂಘಟನೆಗಳ ಮೂಲಕ ಅನಿವಾಸಿ ಭಾರತೀಯರ, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ತೊಂದರೆಯಲ್ಲಿ ಸಿಲುಕಿಕೊಂಡವರಿಗೆ ಆಹಾರ, ವೈದ್ಯಕೀಯ ನೆರವು ಮುಂತಾದ ಸೌಲಭ್ಯವನ್ನು ಕಲ್ಪಿಸುತ್ತಿದ್ದಾರೆ.ಇನ್ನು ಕತಾರ್ ಸೇರಿದಂತೆ ಜಾಗತಿಕ ಮಟ್ಟದ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಸುಭ್ರಮಣ್ಯ ಹೆಬ್ಬಾಗಿಲುರವರು ಕರ್ನಾಟಕ ಸಂಘ ಕತಾರ್ ಉಪಾಧ್ಯಕ್ಷರಾಗಿ ಹಾಗೂ ಖಜಾಂಚಿಯಾಗಿ, ತುಳುಕೂಟ, ಭಾರತೀಯ ಸಾಂಸ್ಕ್ರತಿಕ ಕೇಂದ್ರ, ಕತಾರ್ ಕರ್ನಾಟಕ ಪ್ರೆಂಡ್ಸ್ ನ ಸದಸ್ಯರಾಗಿದ್ದಾರೆ.
ವಿಶೇಷವೆಂದರೆ, ಇವರು ಕತಾರ್ ನಲ್ಲಿ ಸುಮಾರು ೫೦ ಜನ ಕನ್ನಡಿಗರಿಗೆ ಕೆಲಸವನ್ನು ದೊರಕಿಸಿಕೊಟ್ಟಿದ್ದಾರೆ. ಮತ್ತು ಕರ್ನಾಟಕ ಸರ್ಕಾರದಿಂದ ಗೌರವ ಧನ ಸಿಗುವಲ್ಲಿ ಪ್ರಮಾಣಿಕ ಪ್ರಯತ್ನ ನಡೆಸಿದ್ದಾರೆ. ದೇಶ-ವಿದೇಶಗಳಲ್ಲಿ ಹಲವಾರು ಸಾಧಕರನ್ನು ಇವರು ಭೇಟಿ ಮಾಡಿದ್ದು, ಇವರ ಪ್ರೀತಿಗೆ ಪಾತ್ರರಾಗಿದ್ದಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅವರ ಮೆಚ್ಚುಗೆ ಗಳಿಸಿರುವುದು ವಿಶೇಷ..!!! ಅಲ್ಲದೇ ಕೇರಳ ಮತ್ತು ಕೂರ್ಗ್ ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ರೂ ೧೫ ಲಕ್ಷ ಹಣವನ್ನು ಇಂಡಿಯನ್ ಕಮ್ಯೂನಿಟಿ ಬೆನೆವಲೆಂಟ್ ಫೋರಮ್ ನ ವತಿಯಿಂದ ಇವರು ಮತ್ತು ಇವರ ಸದಸ್ಯರು, ಪದಾಧಿಕಾರಿಗಳು ಸೇರಿಕೊಂಡು ಸಿ.ಎಂ ಫಂಡ್ ಗೆ ನೀಡಿದ್ದಾರೆ. ಇನ್ನು ಇತ್ತಿಚೆಗಷ್ಟೇ ಬಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಈ ಬಗ್ಗೆ ಸಿಎಂ ಯಡಿಯೂರಪ್ಪನವರೂ ಸಹ ಭೇಟಿಯಾಗಿ ನೆರೆ ಸಂತ್ರಸ್ತರ ನೆರವಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.ಹೀಗೆ ಗ್ರಾಮೀಣ ಭಾಗದಲ್ಲಿ ಜನಿಸಿ ಕತಾರ್ ದೇಶದಲ್ಲಿ ಮಹತ್ವದ ಹುದ್ದೆ ಅಲಂಕರಿಸಿದ ಸುಬ್ರಹ್ಮಣ್ಯ ಹೆಬ್ಬಾಗಿಲು ಬೈಂದೂರಿನವರು ಎನ್ನುವುದು ನಮ್ಮ ಹೆಮ್ಮೆಯಾಗಿದ್ದು, ಇವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.ಸಾಮಾನ್ಯವಾಗಿ ಎಲ್ಲರೂ ಕೇವಲ ಹಣ ಸಂಪಾದಿಸುವ ಉದ್ದೇಶದಿಂದಲೇ ವಿದೇಶಕ್ಕೆ ಉದ್ಯೋಗಕ್ಕೆ ಹೋಗುವ ಈ ಕಾಲ ಘಟದಲ್ಲಿ ಅದಕ್ಕೆಲ್ಲಾ ಅಪವಾದವೆಂಬಂತೆ ಕಂಡು ಬಂದವರು ಇವರು. ಇವುಗಳಷ್ಟೇ ಅಲ್ಲದೇ ದಾನ-ದತ್ತಿ ಕಾರ್ಯಕ್ರಮಗಳಲ್ಲಿ, ಉಚಿತ ವೈದ್ಯಕೀಯ ಶಿಬಿರಗಳಲ್ಲಿ ಕಾರ್ಮಿಕರ ಶ್ರೇಯೋಭಿವೃದ್ದಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.ಒಟ್ಟಾರೆ ಕನ್ನಡಿಗರಿಗಾಗಿ ಸೇವೆ ಸಲ್ಲಿಸುತ್ತಿರುವ ಇವರ ನಿಸ್ವಾರ್ಥ ಸೇವೆ ಸದಾ ಹೀಗೆ ಮುಂದುವರಿಯಲಿ ಅನ್ನೋದು ಪ್ರತಿಯೊಬ್ಬರ ಆಶಯ

Be the first to comment

Leave a Reply

Your email address will not be published.


*