ತಾಸೆಯ ಶಬ್ದಕ್ಕೆ ಹೆಜ್ಜೆ ಹಾಕಿದ ನಂದಿಗುಡ್ಡ ಫ್ರೆಂಡ್ಸ್ ಹುಲಿ

ಮೈಗೆ ಹಳದಿ,ಕಪ್ಪು ಬಣ್ಣಗಳ ಪಟ್ಟೆ ಬಳಿದುಕೊಂಡು,ತಲೆಗೆ ಹುಲಿ ವೇಷದ ಮುಖವಾಡ ಹಾಕಿಕೊಂಡ ತಂಡ,ಕಾಲು-ಕೈಗಳನ್ನ ಆಡಿಸುತ್ತಾ ತಾಸೆ ಪೆಟ್ಟಿನ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದರೆ,ಅಲ್ಲಿಗೆ ಕರಾವಳಿಯಲ್ಲಿ ಕೃಷ್ಣಾಜನ್ಮಾಷ್ಠಮಿ ಪ್ರಾರಂಭವಾಯಿತೆಂದು ಅರ್ಥ! ಹೌದು ಕರಾವಳಿಗೂ ಹುಲಿವೇಷ ಕುಣಿತಕ್ಕೂ ಅವಿನಾಭಾವ ನಂಟಿದೆ.ತಾಸೆಯ ಶಬ್ದಕ್ಕೆ ಕಲಾವಿದನ ಕುಂಚದಲ್ಲಿ ಅರಳಿದ ಹುಲಿಗಳ ಹೆಜ್ಜೆ ನೋಡಲು ಅದೆಷ್ಟು ಸುಂದರ.ಅಂತೆಯೇ ಮಂಗಳೂರಿನ ಬಾಬುಗುಡ್ಡ ಎಂಬ ಪ್ರದೇಶದಲ್ಲಿ ನಂದಿಗುಡ್ಡ ಫ್ರೆಂಡ್ಸ್ ಹುಲಿ ಹಾಗೂ ಬಿರುವೆರ್ ಜೆಪ್ಪು ಘಟಕ ಕುಡ್ಲ ತಂಡದಿಂದ ೨ ದಿನಗಳ ಕಾಲ ಹುಲಿವೇಷದ ಕುಣಿತ ಅದ್ಧೂರಿಯಾಗಿ ನಡೆಯಿತು.ಸುಮಾರು ೩೮ ವರ್ಷಗಳ ಮೂಲಕ ಹುಲಿವೇಷ ಮಾಡುತ್ತಾ ಬರುತ್ತಿರುವ ಈ ತಂಡ ಕುಣಿತದ ಮೂಲಕ ಜನಮೆಚ್ಚುಗೆ ಪಡೆದಿದೆ.

ಕೃಷ್ಣಾಜನ್ಮಾಷ್ಠಮಿಯ ಮೊದಲ ದಿನ ಗಣಪತಿ ಪೂಜೆಯ ಮೂಲಕ ಹುಲಿವೇಷ ಧಾರಿಗಳ ಬಣ್ಣ ಹಚ್ಚು ಕಾರ್ಯ ಆರಂಭಗೊಂಡಿತು.ಪಟ್ಟೆ ಪಿಲಿ,ಚಿಟ್ಟೆ ಪಿಲಿ,ಬಂಗಾಲಿ ಪಿಲಿ,ಕರಿ ಪಿಲಿ ಎಂಬ ವೈವಿಧ್ಯಮಯ ಬಣ್ಣ ಬಳಿದ ೩೦ ಹುಲಿಗಳು ಕಾಲವಿದನ ಕುಂಚದಲ್ಲಿ ಅರಳಿದ್ದವು. ವಾಡಿಕೆಯಂತೆ ಹುಲಿಗೆ ಧರಿಸುವ ಮುಖವಾಡ,ಚಂಡೆ ಹೀಗೆ ಹುಲಿವೇಷಧಾರಿಗಳು ಧರಿಸುವ ಎಲ್ಲಾ ವಸ್ತುಗಳನ್ನು ಚಂಡೆ ಮೆರವಣಿಗೆಯ ಮೂಲಕ ಊರ ಸುತ್ತಮುತ್ತಲಿನ ಪ್ರದೇಶಕ್ಕೆ ಮೆರವಣಿಗೆ ಮೂಲಕ ಕೊಂಡ್ಯಯಲಾಯಿತು.ತದನಂತರ ವಿಘ್ನ ನಿವಾರಕ ವಿಘ್ನೇಶನನ್ನು ನೆನೆದು ಹುಲಿವೇಷಧಾರಿಗಳು ತಾಸೆಯ ಶಬ್ದಕ್ಕೆ ಕುಣಿಯಲಾರಂಭಿಸಿದರು.

ಇದು ಕೇವಲ ಹುಲಿನೃತ್ಯ ಕೇವಲ ನೃತ್ಯವಲ್ಲ ಬಲಾಢ್ಯತೆಯ ಪ್ರದರ್ಶನ.ಮೈನವಿರೇಳಿಸುವ ಕಸರತ್ತುಗಳನ್ನು ಮಾಡುವ ಮೂಲಕ ಬಣ್ಣ ಬಣ್ಣದ ಹುಲಿವೇಷಕ್ಕೆ ಊರ ಮಂದಿ ಫಿದಾ ಆದ್ರೂ. ಈ ಸಂದರ್ಭದಲ್ಲಿ ಪಿಲಿ ಕುಣಿತ ನೋಡಲು ಆಗಮಿಸಿದ ಮಾಜಿ ಶಾಸಕ ಜೆ.ಆರ್ ಲೋಬೋ ದಕ್ಷಿಣ ಕನ್ನಡದಲ್ಲಿ ಹುಲಿವೇಷ ಕುಣಿತಕ್ಕೆ ಅದರದ್ದೆ ಆದ ಇತಿಹಾಸವಿದೆ.ಆಧುನಿಕ ಕಾಲವಾಗಿದ್ದರು ಹುಲಿವೇಷದ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಬರುತ್ತಿದೆ.ನಂದಿಗುಡ್ಡ ಫ್ರೆಂಡ್ಸ್ ಹುಲಿ ೩೮ ವರ್ಷಗಳ ಮೂಲಕ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ ಎಂದು ತಂಡದ ಕುರಿತು ಮೆಚ್ಚುಗೆಯ ಮಾತನಾಡಿದರು. ಇನ್ನು ತಾಸೆಯ ಶಬ್ದಕ್ಕೆ ಹೆಜ್ಜೆ ಹಾಕುವ ಈ ಹುಲಿಗಳಿಗೆ ಸಿಗುವ ಅಲ್ಪಸ್ವಲ್ಪ ಹಣ ಯಾವುದೇ ಸ್ವಂತ ಉಪಯೋಗಕ್ಕೆ ಬಳಸದೆ ಅತ್ತಾವರ ಬಾಬುಗುಡ್ಡೆ ಶ್ರೀ ನಾಗ-ರಕ್ತೇಶ್ವರಿ-ಧೂಮಾವತಿ ಸಹ ಪರಿವಾರ ದೈವಗಳ ಜಿರ್ಣೋದ್ಧಾರಕ್ಕೆ ನೀಡಲಾಯಿತು.

ಜಯಂತ್ ಪೂಜಾರಿ ನೇತೃತ್ವದಲ್ಲಿ ಆರಂಭಗೊಂಡ ನಂದಿಗುಡ್ಡ ಫ್ರೆಂಡ್ಸ್ ಹುಲಿ ೩೮ ವರ್ಷಗಳಿಂದ ಕರಾವಳಿಯ ಪರಂಪರೆ ಮುಂದುವರೆಸಿಕೊಂಡು ಬಂದಿದೆ.ಇನ್ನು ಕೃಷ್ಣಾನಂದ ಅಂದಿನ ಕಾಲದಿಂದಲೂ ಈ ತಂಡದಲ್ಲಿ ಇದ್ದು ಹುಲಿವೇಷ ಧರಿಸುತ್ತಿದ್ದರು.ಒಟ್ಟಿನಲ್ಲಿ ಸಂಸ್ಕೃತಿಯ ಉಳಿವು ಹಾಗೂ ಹುಲಿವೇಷ ಎಂಬ ಜಾನಪದ ಕಲೆ ಮುಂದುವರೆಸಿಕೊಂಡು ನಮ್ಮ ಪರಂಪರೆಯ ಆಚಾರ ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ನಂದಿಗುಡ್ಡ ಫ್ರೆಂಡ್ಸ್ ಹುಲಿ ಉತ್ತಮ ಕೆಲಸ ಮಾಡುತ್ತಿದೆ ಎಂದರೆ ತಪ್ಪಾಗಲಾರದು.

Be the first to comment

Leave a Reply

Your email address will not be published.


*