ಆ.೧೮ಕ್ಕೆ ಹಜಾಜ್ ಸ್ಪೋಟ್ರ್ಸ್ ಕ್ಲಬ್ (ರಿ). ವತಿಯಿಂದ ಉಚಿತ ಹಿಜಾಮಾ ಚಿಕಿತ್ಸೆ

ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ ಗೋಳ್ತಮಜಲು ಎಂಬಲ್ಲಿ ಕ್ರೀಡಾ ಚಟುವಟಿಕೆಯ ಉದ್ದೇಶವನ್ನಿಟ್ಟುಕೊಂಡು ಅದರಲ್ಲೂ ಕಬಡ್ಡಿ ಆಟಗಾರರನ್ನು ಹುಟ್ಟು ಹಾಕುವ ಉದ್ದೇಶದಿಂದ ೧೯೮೮ ರಲ್ಲಿ ಆರಂಭಗೊಂಡ ಸಂಸ್ಥೆಯೇ ಹಜಾಜ್ ಸ್ಪೋಟ್ರ್ಸ್ ಕ್ಲಬ್ (ರಿ). ಇದರ ಸ್ಥಾಪಕಾಧ್ಯಕ್ಷರಾಗಿ ಹಾಜಿ ಜಿ. ಮುಹಮ್ಮದ್ ಹನೀಫ್ ಆಯ್ಕೆಗೊಂಡು ಸಂಸ್ಥೆಯನ್ನು ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದರು. ಹಲವಾರು ಕಬಡ್ಡಿ ಕ್ರೀಡಾಪಟುಗಳನ್ನು ತರಬೇತುಗೊಳಿಸಿ ರಾಜ್ಯಕ್ಕೆ ಸಮರ್ಪಿಸಿದ ಹೆಗ್ಗಳಿಕೆಗೆ ಈ ಸಂಸ್ಥೆಯು ಪಾತ್ರವಾಗಿದ್ದಲ್ಲದೆ ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಕಬಡ್ಡಿ ಸಾಮ್ರಾಜ್ಯದ ಸಾಮ್ರಾಟನಾಗಿ ಮೆರೆದಂತಹ ಹೆಗ್ಗಳಿಕೆ ಈ ಸಂಸ್ಥೆಗಿದೆ. ಆರಂಭದಲ್ಲಿ ಕಬಡ್ಡಿಯ ಉದ್ದೇಶ ಇಟ್ಟುಕೊಂಡಿದ್ದರೂ ಕೂಡಾ ಬಳಿಕದ ದಿನಗಳಲ್ಲಿ ವಿವಿಧ ಸಾಮಾಜಿಕ ಕಾರ್ಯಗಳಿಗೂ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಮುನ್ನಡೆದಿದೆ. ಸಂಸ್ಥೆಯ ವತಿಯಿಂದ ಅಂತರಾಜ್ಯ ಮಟ್ಟದ, ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಹಲವಾರು ಕಬಡ್ಡಿ ಪಂದ್ಯಾಟಗಳು ಮತ್ತು ವಾಲಿಬಾಲ್ ಪಂದ್ಯಾಟಗಳನ್ನು ಹಮ್ಮಿಕೊಂಡಿದೆ. ನೇತ್ರ, ದಂತ ಮೊದಲಾದ ವೈದ್ಯಕೀಯ ಶಿಬಿರಗಳು, ವಿವಿಧ ಮಾಹಿತಿ ಕಾರ್ಯಾಗಾರಗಳು, ವಿವಿಧೆಡೆ ಶ್ರಮದಾನಗಳು, ವನಮಹೋತ್ಸವ ಮೊದಲಾದ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಇದೀಗ ಸಂಸ್ಥೆಯ ನೂತನ ಸಮಿತಿಯ ನೇತೃತ್ವದಲ್ಲಿ ಮತ್ತೆ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಲು ಸಜ್ಜಾಗಿರುತ್ತದೆ. ಇದರ ಭಾಗವಾಗಿ ಸಂಸ್ಥೆಯ ಆಶ್ರಯದಲ್ಲಿ ಆಯುಷ್ ವಿಭಾಗ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಉಚಿತ ಹಿಜಾಮಾ ಚಿಕಿತ್ಸಾ ಶಿಬಿರವು ೨೦೧೯ ಆಗಸ್ಟ್ ೧೮ ರಂದು ಭಾನುವಾರ ಬೆಳಿಗ್ಗೆ ೮ ರಿಂದ ಗೋಳ್ತಮಜಲಿನ ಹಜಾಜ್ ಸ್ಪೋಟ್ರ್ಸ್ ಕ್ಲಬ್ ಕಛೇರಿಯಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕರಾದ ಯು. ರಾಜೇಶ್ ನಾಯಕ್ ವಹಿಸಲಿದ್ದು, ಮಂಗಳೂರು ಶಾಸಕ ಯು.ಟಿ. ಖಾದರ್ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್ ಹಿಜಾಮಾ ಚಿಕಿತ್ಸೆಯನ್ನು ಉದ್ಘಾಟಿಸುವರು. ಮಾಜಿ ಸಚಿವ ಬಿ. ರಮಾನಾಥ ರೈ, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ, ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಖತೀಬ್ ಶೇಖ್ ಮುಹಮ್ಮದ್ ಇರ್ಫಾನಿ ಅಲ್-ಅಝ್ಹರಿ, ದ.ಕ. ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ. ರಾಜೇಶ್ವರಿ, ಜಿಲ್ಲಾ ಆಯುಷ್ ವಿಭಾಗದ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್, ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದ ಡಾ. ಸಯ್ಯದ್ ಝಾಹಿದ್ ಹುಸೈನ್, ಹಜಾಜ್ ಸ್ಪೋಟ್ರ್ಸ್ ಕ್ಲಬ್ ಗೌರವಾಧ್ಯಕ್ಷರಾದ ಹಾಜಿ ಜಿ. ಮುಹಮ್ಮದ್ ಹನೀಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Be the first to comment

Leave a Reply

Your email address will not be published.


*