ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಸ್ಮರಿಸಿದ ಜಿಲ್ಲಾಧಿಕಾರಿ

ಮಂಗಳೂರಿನಲ್ಲಿ ಧಾರಾಕಾರ ಸುರಿಯುವ ಮಳೆಯ ನಡುವೆಯೇ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಧ್ವಜಾರೋಹಣ ಮಾಡಿದರು. ಕೊಡೆ ಹಿಡಿದುಕೊಂಡು ಧ್ವಜಾರೋಹಣ ಮಾಡಿದ ಜಿಲ್ಲಾಧಿಕಾರಿ ಅವರು ಮಳೆಯ ನಡುವೆಯೇ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ದಕ್ಷಿಣ ಕನ್ನಡದ ಕೆಲೆವೆಡೆ ಪ್ರವಾಹದಿಂದ ಸಂತ್ರಸ್ತರಾದವರಿಗೆ ಸರ್ವ ರೀತಿಯ ನೆರವು ನೀಡಲಾಗುವುದು, ಸರಕಾರ ಸದಾ ನಿಮ್ಮೊಂದಿಗಿದೆ ಎಂದು ನೆರೆ ಸಂತ್ರಸ್ತರಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭರವಸೆ ನೀಡಿದರು. ನೆರೆ ಪ್ರವಾಹದಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸಲು ಸಹಕರಿಸುವಂತೆಯೂ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದರು.


ನೆರೆ ಪರಿಹಾರ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಿದ ಸಾರ್ವಜನಿಕರಿಗೆ, ಎನ್ ಡಿ ಆರ್ ಎಫ್ ತಂಡ, ಅಗ್ನಿಶಾಮಕ ದಳ, ಪೊಲೀಸ್, ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಕೃತಜ್ಞತೆ ಸಲ್ಲಿಸಿದರು.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಗ್ರಾಮ ಮಟ್ಟದಲ್ಲಿ ದುಡಿಯುವ ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಆಶಾ ಕಾರ್ಯಕರ್ತೆಯರು, ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಅಂಗನವಾಡಿ ಸಿಬ್ಬಂದಿ, ವಾಹನ ಚಾಲಕರು, ಜವಾನರು ಸೇರಿದಂತೆ ಎಲ್ಲರ ಸೇವೆಯನ್ನು ಸ್ಮರಿಸಿರುವುದು ವಿಶೇಷವಾಗಿತ್ತು.
ಸಮಾರಂಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ , ಮಾಜಿ ಸಚಿವ ಯು.ಟಿ.ಖಾದರ್, ಶಸಾಕರ ವೇದವ್ಯಾಸ ಕಾಮತ್, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿದಂತೆ ಹಿರಿಯ ಪೊಲೀಸ್ ಮತ್ತು ವಿವಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪಥಸಂಚಲನ ನಡೆಸುವ ತಂಡಗಳಿಗೆ ನಿಲ್ಲಲು ಪೆಂಡಾಲ್ ನಿರ್ಮಿಸಲಾಗಿತ್ತು. ಮಳೆಯ ನಡುವೆಯೇ ಪಥಸಂಚಲನ ನಡೆಸಲಾಯಿತು. ವಿಂಗ್ ಕಮಾಂಡರ್ ಮಳೆಯಲ್ಲಿ ತೊಯ್ದುಕೊಂಡೇ ಗೌರವ ಸಲ್ಲಿಸಿದರು. ಪೊಲೀಸ್ ಬ್ಯಾಂಡ್‌ನಲ್ಲಿ ರಾಷ್ಟ್ರಗೀತೆ, ವಿದ್ಯಾರ್ಥಿಗಳಿಂದ ನಾಡಗೀತೆ, ರೈತಗೀತೆ ಹಾಡಲಾಯಿತು.

 

Be the first to comment

Leave a Reply

Your email address will not be published.


*