ಮಾಲಿವುಡ್‌ನಲ್ಲಿ ಕಮಾಲ್ ಮಾಡಿದ ಕುಡ್ಲದ ಬೆಡಗಿ ವಫಾ ಕದೀಜಾರಹ್ಮಾನ್

‘ನನಗೆ ಮಲಯಾಳಂ ಗೊತ್ತಿಲ್ಲ, ನಾನು ಮಂಗಳೂರಿನವಳು‘ ಎಂದು ಯಾವುದೇ ಮುಲಾಜಿಲ್ಲದೇ ಹೇಳುವ ಈ ಮುಗ್ದೆಯ ಹೆಸರು ವಫಾ ಕದೀಜಾರಹ್ಮಾನ್. ತನ್ನ ೨೨ರ ಹರೆಯದಲ್ಲಿ ಒಮ್ಮೆಯೂ ಕೂಡಾ ಅಭಿನಯಿಸಿ ಗೊತ್ತಿಲ್ಲದ ಈ ಯುವತಿ ಇದೀಗ ಮೊದಲ ಬಾರಿಗೆ ಅಭಿನಯಿಸಿ ಮಲೆಯಾಳಂ ಚಿತ್ರರಂಗದಲ್ಲಿ ಮನೆಮಾತಾಗಿದ್ದಾಳೆ. ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಶಂಕರ ರಾಮಕೃಷ್ಣನ ನಿರ್ದೇಶಿಸಿದ “ಪದಿನೆಟ್ಟಾಂ ಪಡಿ” ಎಂಬ ಕ್ಲಾಸಿಕ್ ಚಿತ್ರದಲ್ಲಿ ಪಾತ್ರ ವಹಿಸಿದ್ದಾರೆ . ಒಮ್ಮೆಯೂ ಈ ವಫಾ ಕದೀಜಾಳದ್ದು ಪ್ರಮುಖ ಕೂಡಾ ಮುಖಕ್ಕೆ ಬಣ್ಣ ಹಚ್ಚಿರದ ಈ ಚೆಲುವೆ ಚೊಚ್ಚಲ ಚಿತ್ರದಲ್ಲಿ ಅಭಿನಯಿಸಿದ್ದು ಮಮ್ಮುಟ್ಟಿ ಜೊತೆ. ಇದೊಂದು ಮಹಾಭಾಗ್ಯವೇ ಸರಿ. ಪೃಥ್ವಿರಾಜ್, ಪ್ರಿಯಾಮಣಿ, ಸೂರಜ್ ವೆಂಜಾರಮೂಡ್ ಮುಂತಾದ ಖ್ಯಾತ ನಟರು ಅಭಿನಯಿಸಿದ ಪದಿನೆಟ್ಟಾಂ ಪಡಿ ಚಿತ್ರದಲ್ಲಿ ’ಏಂಜೆಲ್’ ಎಂಬ ಕಾಲೇಜು ಪಾತ್ರ ವಿದ್ಯಾರ್ಥಿನಿಯ ನಿರ್ವಹಿಸುವ ಮೂಲಕ ವಫಾಖದೀಜಾ ಎಂಬ ಶ್ವೇತವರ್ಣದ ಮುಗ್ಧಚೆಲುವೆ ಮೋಲಿವುಡ್ ನಲ್ಲಿ ಎಲ್ಲರ ಮನಸೂರೆಗೈದಿದ್ದಾಳೆ. ಮಂಗಳೂರಿನ ಖ್ಯಾತ ನ್ಯಾಯವಾದಿ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಎಂ.ಬಿ.ಅಬ್ದುಲ್ ರಹ್ಮಾನ್ ರವರ ಮೊಮ್ಮಗಳು ಈ ವಫಾ ಕದೀಜಾರಹ್ಮಾನ್. ತಂದೆ ಕಾಸರಗೋಡು ಜಿಲ್ಲೆಯ ಬಾಯಾರಿನ ಅಬ್ದುಲ್ ಖಾದರ್ ತಿರುವನಂತಪುರದಲ್ಲಿ ಹೊಟೇಲು ಉದ್ಯಮಿ. ತಾಯಿ ಶಾಹಿದಾ ಗೃಹಿಣಿ. ವಫಾ ಕದೀಜಾ ಅಜ್ಜನ ಹಾದಿಯಲ್ಲಿ ಸಾಗುವವಳು. ತಿರುವನಂತಪುರದ ನ್ಯಾಷನಲ್ ಯೂನಿವರ್ಸಿಟಿ ಆಫ್ ಲೀಗಲ್ ಸ್ಟಡೀಸ್ ಸಂಸ್ಥೆಯಲ್ಲಿ ಕಾನೂನು ಪದವಿ ಕಲಿಯುತ್ತಿದ್ದು, ಸಮಾಜಮುಖಿಯಾಗಿ ಚಿಂತಿಸುವವಳು. ನಟನೆಯ ಗಂಧಗಾಳಿ ಗೊತ್ತಿಲ್ಲದ ವಫಾ ತನ್ನ ಬಾಲ್ಯಗೆಳತಿ, ನಟಿ ಅಹನಾಳ ಒತ್ತಡಕ್ಕೆ ಮಣಿದು ಶಂಕರ್ ರಾಮಕೃಷ್ಣನ್ ಸ್ಕ್ರಿನ್ ಟೆಸ್ಟ್‌ಗೆ ತೆರಳಿದ್ದಳು. ಪವಾಡವೆಂಬಂತೆ ಮೊದಲ ಸುತ್ತಿನಲ್ಲಿಯೇ ತೇರ್ಗಡೆಯಾದಳು. ಕಲಿಕೆಯಲ್ಲಿ ಜಾಣೆಯಾಗಿದ್ದ ವಫಾ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತಾಗ ನಡುಗಿ ಹೋಗಿದ್ದೆ ಎನ್ನುತ್ತಾಳೆ. ‘ಆ ಕ್ಷಣವನ್ನು ನೆನಪಿಸುವಾಗ ಮೈಜುಮ್ಮೆನ್ನುತ್ತದೆ, ಮುಂಭಾಗದಲ್ಲಿ ಕ್ಯಾಮೆರಾ ಇಲ್ಲವೇ ಇಲ್ಲ ಆಂತ ಭ್ರಮಿಸಿ ನಿನ್ನಷ್ಟಕ್ಕೇ ಅಭಿನಯಿಸು‘ ಎಂದು ಶಂಕರ ರಾಮಕೃಷ್ಣನ್ ಪ್ರೋತ್ಸಾಹ ಕೊಟ್ಟಾಗ ಅಭಿನಯಿಸಿಬಿಟ್ಟೆ ಎಂದು ಹೇಳುತ್ತಾಳೆ. ಕೇರಳದ ರಾಜಧಾನಿ ನಗರಿ ತಿರುವನಂತಪುರದಲ್ಲಿ ಪ್ರಾಥಾಮಿಕ, ಪ್ರೌಢಶಿಕ್ಷಣವನ್ನು ಮುಗಿಸಿ, ಅಲ್ಲಿಯೇ ಕಾನೂನು ಪದವಿ ಕಲಿಯುತ್ತಿರುವ ವಫಾಳಿಗೆ ಅಭಿನಯ ಎಂಬುದು ಬಯಸದೇ ಬಂದ ಭಾಗ್ಯ. ಅದೂ ತನ್ನ ಕಲ್ಪನೆಯ ಪಾತ್ರವೇ ಆಕೆಗೆ ದೊರೆತಿರುವುದು ಕಾಕತಾಳೀಯ. ಮಾದಕ ದ್ರವ್ಯ ಪಿಡುಗಿನ ವಿರುದ್ಧ ಹೋರಾಡುವ ವಿದ್ಯಾರ್ಥಿನಿಯ ಪಾತ್ರವಾಗಿತ್ತದು. ಅಜ್ಜ ಎಂ.ಬಿ.ಅಬ್ದುಲ್ ರಹ್ಮಾನ್ ಆಯೋಜಿಸುತ್ತಿದ್ದ ರಕ್ತದಾನ ಶಿಬಿರಗಳನ್ನು ಕಂಡು ಪ್ರೇರೇಪಿತಳಾಗಿ ಕಾಲೇಜಿನಲ್ಲಿಯೇ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದವಳು, ಸ್ವಯಂ ರಕ್ತದಾನ ನೀಡುತ್ತಿದ್ದವಳು ಈ ವಫಾ.ಮಂಗಳೂರಿನ ಚೆಲುವೆ ವಫಾ ಕದೀಜಾ ಮೊದಲ ಚಿತ್ರದಲ್ಲಿಯೇ ಅತ್ಯದ್ಭುತವಾದ ಅಭಿನಯ ಮಾಡಿದ್ದಾಳೆ. ಮಮ್ಮುಟ್ಟಿ ಜೊತೆ ಅಭಿನಯಿಸುವ ಅವಕಾಶ ದೊರೆತಿರುವುದು ಅವಿಸ್ಮರಣೀಯ. “ಪದಿನೆಟ್ಟಾಂ ಪಡಿ”ಯ ಮೂಲಕ ಹದಿನೆಂಟನೇ ಮೆಟ್ಟಿಲೇರಿರುವ ವಫಾ ಮೊದಲ ಚಿತ್ರದಲ್ಲಿಯೇ ಅಭೂತಪೂರ್ವ ಪ್ರಚಾರಗಿಟ್ಟಿಸಿದ್ದಾಳೆ. ಕಾನೂನಿನ ಜೊತೆಗೆ ಸಮಾಜಸೇವೆ ಈಕೆಗೆ ಪಂಚಪ್ರಾಣ. ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದರೆ ಖಂಡಿತಾ ಅಭಿನಯಿಸುತ್ತೇನೆನ್ನುವ ವಫಾ ಕದೀಜಾರಹ್ಮಾನ್ ದೇವರನಾಡಿನಲ್ಲಿ ತಣ್ಣನೆಯ ಸುಗಂಧ ಗಾಳಿ ಬೀಸುತ್ತಿದ್ದಾಳೆ.

Be the first to comment

Leave a Reply

Your email address will not be published.


*