ಕಾಫಿ ಡೇ ಮಾಲೀಕ ಸಿದ್ದಾರ್ಥ ನಾಪತ್ತೆ

V G Siddhartha

ಮಂಗಳೂರು : ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಳಿಯನೆಂದೇ ಜನಪ್ರಿಯನಾಗಿರುವ ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ದಾರ್ಥ ಸೋಮವಾರ ಸಂಜೆ ಮಂಗಳೂರು ನೇತ್ರಾವತಿ ಸೇತುವೆ ಸಮೀಪದಿಂದ ನಾಪತ್ತೆ ಆಗಿದ್ದಾರೆ.

ಚಿಕ್ಕಮಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದ ಸಿದ್ದಾರ್ಥ ಸೋಮವಾರ ಸಂಜೆ 6.30 ಗಂಟೆ ಸುಮಾರಿಗೆ ಮಂಗಳೂರು- ಉಳ್ಳಾಲ ಹೆದ್ದಾರಿಯಲ್ಲಿ ನೇತ್ರಾವತಿ ಸೇತುವೆಯ ಫುಟ್ ಪಾತಿನಲ್ಲಿ ವಾಕಿಂಗ್ ಮಾಡಿದ್ದು ಅನಂತರ ನಾಪತ್ತೆ ಆಗಿರುವುದಾಗಿ ಕಾರು ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ನೇತ್ರಾವತಿ ಸೇತುವೆ ಬಳಿ ತಾನು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ನಿಲ್ಲಿಸುವಂತೆ ಚಾಲಕನಿಗೆ ತಿಳಿಸಿ, ದೂರವಾಣಿ ಸಂಭಾಷಣೆ ಮಾಡುತ್ತಲೇ ತಾನು ವಾಕಿಂಗ್ ಮಾಡಿಕೊಂಡು ಬರುವುದಾಗಿ ತಿಳಿಸಿದ್ದರು. ಮಾಲಕನ ಅಣತಿಯಂತೆ ಕಾರು ಚಾಲಕ ಕಾರನ್ನು ಸೇತೆಯ ಇನ್ನೊಂದು ಬದಿಯಲ್ಲಿ ವಾಹನ ನಿಲ್ಲಿಸಿ ಕಾಯುತ್ತಿದ್ದ. ತುಂಬಾ ಹೊತ್ತಾದರು ಸಿದ್ಧಾರ್ಥ ಕಾಣದಿದ್ದಾಗ ಆತ ಮೊಬೈಲ್ ಸಂಪರ್ಕ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಪೊಲೀಸ್ ಮೂಲಗಳ ಪ್ರಕಾರ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಆಗಮಿಸಿದ ಸಿದ್ದಾರ್ಥ ಸಕಲೇಶಪುರ ತೆರಳುವುದಾಗಿ ಹೇಳಿ, ಅನಂತರ ಮಂಗಳೂರಿಗೆ ಆಗಮಿಸಿದ್ದರು.

ಸೋಮವಾರ ಸಂಜೆಯಿಂದ ನೇತ್ರಾವತಿ ನದಿಯಲ್ಲಿ ಮತ್ತು ಸಮುದ್ರ ಅಳಿವೆ ಬಾಗಿಲು ಪ್ರದೇಶದಲ್ಲಿ ತೀವ್ರವಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಅಗ್ನಿಶಾಮಕ ದಳ, ಮುಳುಗು ತಜ್ಞರನ್ನು ಬಳಸಿ ನದಿ ಪರಿಶೀಲನೆ ನಡೆಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭೇಟಿ ನೀಡಿದ್ದಾರೆ. ಪೊಲೀಸ್ ಲಾಖೆಯ ಉನ್ನತಾಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಮಾಜಿ ಸಚಿವ , ಶಾಸಕ ಯು.ಟಿ.ಖಾದರ್ ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇತ್ತ ಬೆಂಗಳೂರಿನಲ್ಲಿ ಎಸ್ಎಂ ಕೃಷ್ಣ ಅವರ ಸದಾಶಿವ ನಗರದ ಮನೆಯಲ್ಲಿ ಕುಟುಂಬಸ್ಥರ ಆತಂಕ ಮುಂದುವರೆದಿದೆ. ಕೃಷ್ಣ ಅವರ ಮನೆಗೆ ಮಾಜಿ ಸಚಿವ ಡಿಕೆ ಶಿವಕುಮಾರ್, ಬಿಎಲ್ ಶಂಕರ್ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೆಳಗ್ಗೆ ಭೇಟಿ ಮಾಡಿ, ಕೃಷ್ಣ ಅವರಿಗೆ ಧೈರ್ಯ ತುಂಬಿದ್ದಾರೆ.

Be the first to comment

Leave a Reply

Your email address will not be published.


*