ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ ;ಪರಿಶೀಲನೆ

ಮಂಗಳೂರಿನ ಪಚ್ಚನಾಡಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಇದೇ ವೇಳೆ ಅವರು ಪರಿಹಾರ ಕೇಂದ್ರ ಎಲ್ಲಾ ಕಟ್ಟಡಗಳನ್ನು, ಅಡುಗೆ ಕೋಣೆ, ಶೌಚಾಲಯ, ಕೈತೋಟವನ್ನು ವೀಕ್ಷಿಸಿದರು. ಕೇಂದ್ರದ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು. ತದ ಬಳಿಕ ಮಾತನಾಡಿದ ಅವರು, ನಗರದ ಪಚ್ಚನಾಡಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ವಿಶಾಲವಾದ ಬೇರೆ ಜಮೀನು ಮಂಜೂರು ಮಾಡಲು ಮಂಗಳೂರು ತಹಶೀಲ್ದಾರ್‌ಗೆ ಈ ಸೂಚನೆ ನೀಡಿದರು. ಪ್ರಸಕ್ತ ನಿರಾಶ್ರಿತರ ಪರಿಹಾರ ಕೇಂದ್ರವು ಎರಡು ಎಕರೆ ಜಾಗದಲ್ಲಿದ್ದು, ಸುಮಾರು ೧೫೦ಕ್ಕೂ ಅಧಿಕ ಮಂದಿ ನಿರಾಶ್ರಿತರು ಇಲ್ಲಿ ವಾಸ್ತವ್ಯದಲ್ಲಿದ್ದಾರೆ. ನಿರಾಶ್ರಿತರಿಗೆ ವಾಸ್ತವ್ಯ ತಾಣವಲ್ಲದೇ, ಅವರಿಗೆ ಉಳಿದ ಸಮಯದಲ್ಲಿ ಕೃಷಿ, ತೋಟಗಾರಿಕೆ, ಗುಡು ಕೈಗಾರಿಕೆ ಸೇರಿದಂತೆ ವೃತ್ತಿ ಮಾಡಲು ವಿಶಾಲ ಜಮೀನು ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಂದಿನ ೧೫ ದಿನಗಳೊಳಗೆ ೧೦ರಿಂದ ೧೫ ಎಕರೆ ಜಮೀನು ಮಂಜೂರು ಮಾಡಲು ಅವರು ತಿಳಿಸಿದರು.ಯಾವುದೋ ಕಾರಣದಿಂದ ಭಿಕ್ಷಾಟನೆಯಲ್ಲಿ ತೊಡಗಿದವರನ್ನು, ಯಾವುದೇ ಆಶ್ರಯವಿಲ್ಲದವರನ್ನು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿಡಲಾಗಿದ್ದು, ಇವರಿಗೆ ಘನತೆಯಿಂದ ಜೀವಿಸಲು ಎಲ್ಲಾ ರೀತಿಯ ಸೌಲಭ್ಯ ಒದಗಿಸಿಕೊಡಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದು ಪಿ. ವಿಶ್ವನಾಥ ಶೆಟ್ಟಿ ತಿಳಿಸಿದರು.ಈ ವೇಳೆ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಲೋಕಾಯುಕ್ತ ಇನ್ಸ್‌ಪೆಕ್ಟರ್ ಭಾರತೀ, ಕಂದಾಯ ನಿರೀಕ್ಷಕ ಆಸೀಫ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

Be the first to comment

Leave a Reply

Your email address will not be published.


*