ಡೆಂಗ್ಯೂ ಜ್ವರ: ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ-ಬಿಸಿಲು ಕಣ್ಣಾಮುಚ್ಚಾಲೆಯ ಪರಿಣಾಮ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಇದರ ಹತೋಟಿಗೆ ಜಿಲ್ಲಾಡಳಿತ ವ್ಯಾಪಕ ಕಾರ್ಯತಂತ್ರಗಳನ್ನು ರೂಪಿಸಿದ್ದು, ಸಾರ್ವಜನಿಕರು ಕೂಡ ಸೊಳ್ಳೆ ಉತ್ಪತ್ತಿಯ ತಾಣಗಳನ್ನು ನಾಶಪಡಿಸುವ ಮೂಲಕ ಎಚ್ಚರಿಕೆ ವಹಿಸಬೇಕು ಎಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾಹಿತಿ ನೀಡಿದರು.

ಕಳೆದ ತಿಂಗಳು (ಜೂನ್) 75 ಪ್ರಕರಣಗಳು ಡೆಂಗ್ಯೂ ಪಾಸಿಟಿವ್ ಪತ್ತೆಯಾಗಿದ್ದು, ಜುಲೈಯಲ್ಲಿ ಪ್ರಮಾಣ ಏರಿಕೆಯಾಗಿದೆ. ಜಿಲ್ಲೆಯಾದ್ಯಂತ ಈ ವರೆಗೆ 352 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 200ರಷ್ಟು ಪ್ರಕರಣ ವರದಿಯ ಹಂತದಲ್ಲಿದ್ದು, 139 ಚಿಕಿತ್ಸಾ ಹಂತದಲ್ಲಿವೆ. ಉಳಿದ ಪ್ರಕರಣಗಳು ಗುಣಮುಖವಾಗಿದೆ. ಆದರೆ ಗಾಬರಿಪಡುವ ಅಗತ್ಯವಿಲ್ಲ. ಕಳೆದ ವರ್ಷ ಜೂನ್‍ನಲ್ಲಿ 230 ಪಾಸಿಟಿವ್ ಪ್ರಕರಣಗಳಿದ್ದವು ಎಂದು ಹೇಳಿದರು.

ಡೆಂಗ್ಯೂ ಹರಡುವ ಸೊಳ್ಳೆಗಳು ಶುದ್ಧ ನೀರಿನಲ್ಲಿಯೇ ಇರುತ್ತವೆ. ಆದ್ದರಿಂದ ಮಳೆ ನೀರನ್ನು ಅಂಗಳ, ತಾರಸಿ, ಬಕೆಟ್‍ಗಳಲ್ಲಿ ತುಂಬಿಸಿಡುವ ಕ್ರಮವನ್ನು ಕೈಬಿಡಬೇಕು. ಮನೆಯ ಒಳಗೆ ನೀರು ಸಂಗ್ರಹಿಸುವಾಗಲೂ ವಿಶೇಷ ಎಚ್ಚರಬೇಕು. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮೈಮುಚ್ಚುವ ಉಡುಪು ಧರಿಸಿದರೆ ಉತ್ತಮ ಸಲಹೆ ನೀಡಿದರು.

ಪಾಲಿಕೆ ವ್ಯಾಪ್ತಿಯ ಪ್ರತೀ ಮನೆಗೆ ಭೇಟಿ ನೀಡಿ ಮಾಹಿತಿ ನೀಡಿ ಅರಿವು ಮೂಡಿಸಲು 200 ತಂಡಗಳನ್ನು ರಚಿಸಲು ನಿರ್ಧರಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಪಾಲಿಕೆ ಸಿಬಂದಿ ಮನೆ ಮನೆಗೆ ಭೇಟಿ ನೀಡಿ ಜ್ವರ ಪೀಡಿತರಿದ್ದರೆ ತಪಾಸಣೆ ನಡೆಸಲಿದ್ದಾರೆ. ಸೊಳ್ಳೆ ನಿರ್ಮೂಲನಕ್ಕೆ ಪ್ರತೀ ಮನೆಯ ಒಳ-ಹೊರಗೆ ಫಾಗಿಂಗ್ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೋರಿದರು

 

Be the first to comment

Leave a Reply

Your email address will not be published.


*