ವಿಪ್ ಇದರ ನಿಜವಾದ ಅರ್ಥವೇನು?

ಬೆಂಗಳೂರು: ಇಂದಿನಿಂದ ಅಧಿವೇಶನ ಆರಂಭವಾಗಲಿದ್ದು ದೋಸ್ತಿ ಸರ್ಕಾರದ ಎಲ್ಲ ಶಾಸಕರಿಗೆ ವಿಪ್ ಜಾರಿಯಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ. 15ನೇ ವಿಧಾನಸಭೆಯ 4ನೇ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಸರ್ಕಾರ ಪರ ಕಡ್ಡಾಯವಾಗಿ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿದೆ. ಅಲ್ಲದೇ ಗೈರು ಹಾಜರಾದರೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಸಂವಿಧಾನದ ಅನುಚ್ಛೇದ-10 (ಪಕ್ಷಾಂತರ ನಿಷೇಧ ಕಾಯ್ದೆ)ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿದೆ.

ಹಾಗಾದ್ರೇ ವಿಪ್‌ ಎಂದರೇನು? ವಿಪ್ ಅನ್ನು ಯಾವಾಗ ಜಾರಿ ಮಾಡಬಹುದು? ವಿಪ್ ಉಲ್ಲಂಘನೆ ಮಾಡಿದರೆ ಏನೆಲ್ಲ ತೊಂದರೆ ಶಾಸಕರಿಗೆ ಆಗುತ್ತದೆ.

ಅಧಿವೇಶನ, ಬಜೆಟ್ ಸೇರಿದಂತೆ ಅನಿವಾರ್ಯ ಸಂದರ್ಭಗಳಲ್ಲಿ ಈ ವಿಪ್‌ ನೀಡಲಾಗುತ್ತದೆ. ವಿಪ್‌ನಲ್ಲಿ ಇಂತಿಷ್ಟು ದಿನಾಂಕದಿಂದ ಇಂತಿಷ್ಟು ದಿನಾಂಕದವರೆಗೆ ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕು. ಸರ್ಕಾರದ ಪರ ಮತ ಚಲಾಯಿಸಬೇಕು ಎಂದು ತಿಳಿಸಲಾಗಿರುತ್ತದೆ. ಸದನಕ್ಕೆ ಗೈರು ಹಾಜರಾಗುವುದು ವಿಪ್‌ ಉಲ್ಲಂಘನೆ ಎಂದು ಪರಿಗಣಿಸಿ ಶಾಸಕಾಂಗ ಪಕ್ಷದ ನಾಯಕರು ಇಲ್ಲವೇ ಮುಖ್ಯ ಸಚೇತಕರು ಸ್ಪೀಕರ್‌ಗೆ ದೂರು ಸಲ್ಲಿಸಲು ಅವಕಾಶ ಇದೆ.

ಯಾವುದೇ ಒಂದು ರಾಜಕೀಯ ಪಕ್ಷವು ತಮ್ಮ ಪಕ್ಷದ ಸದಸ್ಯರಿಗೆ ಅನಿವಾರ್ಯ ಸಂದರ್ಭದಲ್ಲಿ ಪಕ್ಷದ ತೀರ್ಮಾನ ಪಾಲಿಸುವ ಸಂಬಂಧ ನೀಡುವ ನೋಟಿಸ್‌. ಪಕ್ಷದ ‘ಬಿ’ ಫಾರಂ ಪಡೆದು ಪಕ್ಷದ ಚಿಹ್ನೆಯಡಿ ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದವರು ಇದನ್ನು ಪಾಲಿಸಬೇಕು. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ.

ಒನ್‌ ಲೈನ್‌ ವಿಪ್‌: ವಿಶ್ವಾಸ ಮತ ಸಂದರ್ಭದಲ್ಲಿ ನೀಡುವ ಸರ್ಕಾರದ ಪರ ಹಾಗೂ ಪಕ್ಷದ ಆದೇಶ ಪಾಲನೆಗೆ ನೀಡುವ ವಿಪ್‌. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವ ಸಂಬಂಧ ನೀಡುವ ವಿಪ್‌.

ಟೂ ಲೈನ್‌ ವಿಪ್‌: ಬಜೆಟ್ ಅಥವಾ ಪ್ರಮುಖ ವಿಧೇಯಕ ಮಂಡನೆ ಮತ್ತು ಅನುಮೋದನೆ ಸಮಯದಲ್ಲಿ ನೀಡುವ ವಿಪ್‌. ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ನೀಡುವ ವಿಪ್‌.

ತ್ರೀ ಲೈನ್‌ ವಿಪ್‌: ಅಧಿವೇಶನದ‌ಲ್ಲಿ ಹಾಜರಾತಿ, ವಿತ್ತೀಯ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳುವಿಕೆ, ಬಜೆಟ್ ಅನುಮೋದನೆ ಸಂದರ್ಭದಲ್ಲಿ ಸರ್ಕಾರದ ಪರ ಮತ ಚಲಾಯಿಸುವಿಕೆಗೆ ನೀಡುವ ವಿಪ್‌. ಕಾಯಿದೆ ಪ್ರಕಾರ ಯಾವುದೇ ಶಾಸಕ, ಸಂಸದ ತನ್ನ ಪಕ್ಷದ ವಿಪ್‌ ಉಲ್ಲಂಘಿಸಿ ಮತ ಚಲಾಯಿಸಿದ ಬಳಿಕವಷ್ಟೇ ಸ್ಪೀಕರ್‌ ಕ್ರಮ ಕೈಗೊಳ್ಳಬಹುದು. ಹಾಗಾಗಿ, ವಿಪ್‌ ಉಲ್ಲಂಘನೆಗಾಗಿ ಪಕ್ಷಾಂತರಿ ಸದಸ್ಯರ ಸದಸ್ಯತ್ವ ರದ್ದಾದರೂ, ಅವರು ಚಲಾಯಿಸಿದ ಮತಕ್ಕೆ ಮೌಲ್ಯ ಇರುತ್ತದೆ.

ವಿಪ್ ಅನ್ವಯವಾಗುತ್ತಾ?
ರಾಜೀನಾಮೆ ಅಂಗೀಕಾರವಾಗದ ಶಾಸಕರಿಗೆ ವಿಪ್ ಅನ್ವಯವಾಗುತ್ತದೋ ಇಲ್ಲವೋ ಎನ್ನುವುದು ಇನ್ನು ಗೊಂದಲದಲ್ಲಿದೆ. ರಾಜೀನಾಮೆ ಅಂಗೀಕಾರವಾಗುವವರೆಗೂ ವಿಪ್ ಅನ್ವಯವವಾಗುತ್ತದೆ ಎಂದು ಕೆಲ ಕಾನೂನು ಪಂಡಿತರು ಹೇಳುತ್ತಿದ್ದಾರೆ.

Be the first to comment

Leave a Reply

Your email address will not be published.


*