ಮಂಗಳೂರಿನಲ್ಲಿ ರಾಜ್ಯದ ಮೆಡಿಕಲ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳು ಪ್ರಸ್ತುತ ರಾಜೀವ್ ಗಾಂಧಿ ವೈದ್ಯಕೀಯ ವಲಯ ಕಚೇರಿ-ಖಾದರ್

ರಾಜ್ಯದ ಮೆಡಿಕಲ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳು ಪ್ರಸ್ತುತ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟಿದ್ದು, ಅದರ ವಲಯ ಕಚೇರಿಯನ್ನು ಮಂಗಳೂರಿನಲ್ಲಿ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವೈದ್ಯಕೀಯ ಕಾಲೇಜು ಆರಂಭ ಸೇರಿದಂತೆ ಹಲವಾರು ರೀತಿಯ ಕಚೇರಿ ಕೆಲಸಗಳಿಗೆ ವಿದ್ಯಾರ್ಥಿಗಳು ಸೇರಿದಂತೆ ಬೆಂಗಳೂರಿಗೆ ಆಗಾಗ್ಗೆ ಭೇಟಿ ನೀಡಬೇಕಿದೆ. ಈ ತೆರನಾದ ಸಮಸ್ಯೆಗಳನ್ನು ತಪ್ಪಿಸಲು ವಲಯ ಕಚೇರಿಯನ್ನು ಮಂಗಳೂರಿನಲ್ಲಿ ಆರಂಭಿಸಲು ಸರಕಾರ ಚಿಂತನೆ ನಡೆಸಿದೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಸಮೀಪದಲ್ಲೇ ವ್ಯವಸ್ಥೆಗೆ ಚಿಂತನೆ ಮಾಡಲಾಗಿದೆ. ವಿವಿಯಿಂದ ಐದು ಎಕರೆ ಭೂಮಿ ಲಭ್ಯವಾದಲ್ಲಿ ಅಲ್ಲೇ ಈ ವಲಯ ಸಂಕೀರ್ಣವನ್ನು ಆರಂಭಿಸಲಾಗುವುದು. ವೈದ್ಯಕೀಯ ಕಾಲೇಜು ವಿಶ್ವವಿದ್ಯಾನಿಲಯ ಹಾಗೂ ಸ್ಪೋರ್ಟ್ಸ್ ಕಾಂಪ್ಲೆಕ್ಸನ್ನು ಕೂಡಾ ಈ ವಲಯ ಕಚೇರಿ ಹೊಂದಲಿದೆ. ರಾಜೀವ್ ಗಾಂಧಿ ವಿವಿಯ ಮುಂದಿನ ಸಿಂಡಿಕೇಟ್ ಸಭೆ ಮಂಗಳೂರಿನಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ಇಲೆಕ್ಟ್ರಿಕ್ ವಾಹನಗಳಿಗೆ ಒತ್ತು: ಅತೀ ಶೀಘ್ರದಲ್ಲಿ ನೂತನ ನೀತಿ ಜಾರಿ

ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲೆಕ್ಟ್ರಿಕ್ ಆಟೋ, ಕಾರು, ಬೈಕ್‌ಗಳಿಗೆ ಪ್ರೋತ್ಸಾಹಿಸಲು ಮನಪಾ ವ್ಯಾಪ್ತಿಯಲ್ಲಿ ಇಲೆಕ್ಟ್ರಿಕಲ್ ಕಾರು ಪಾರ್ಕಿಂಗ್ ಮತ್ತು ಜಾರ್ಜಿಂಗ್ ವ್ಯವಸ್ಥೆಯನ್ನು ಮಾಡುವ ಬಗ್ಗೆ ಸಚಿವ ಖಾದರ್ ತಿಳಿಸಿದರು.

ಮಾತ್ರವಲ್ಲದೆ ವಾಹನಗಳಿಗೆ ನಿರ್ದಿಷ್ಠ ಜಾಗಗಳಲ್ಲಿ ಪಾರ್ಕಿಂಗ್ ಹಾಗೂ ಜಾರ್ಜಿಂಗ್ ವ್ಯವಸ್ಥೆ ಸೇರಿದಂತೆ ಈ ಯೋಜನೆಗೆ ಸಂಬಂಧಿಸಿ ನೀತಿಯೊಂದನ್ನು ಅತೀ ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಸಚಿವ ಯು.ಟಿ.ಖಾದರ್ ಈ ಸಂದರ್ಭ ಮಾಹಿತಿ ನೀಡಿದರು.

ಕಡಲ್ಕೊರೆತ: ಅರ್ಹರಿಗೆ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮ

ಉಳ್ಳಾಲದಲ್ಲಿ ಕಡಲ್ಕೊರೆತದಿಂದ ಸಂತ್ರಸ್ತರಾಗುವ ಜನರಿಗೆ ಶಾಶ್ವತ ಪರಿಹಾರವಾಗಿ ಎರಡು ಬೆಡ್‌ರೂಮ್ ಮನೆ ಅಥವಾ ಮೂರು ಸೆಂಟ್ಸ್ ಜಮೀನು ನೀಡಿ, ಕೊಡಗು ಮಾದರಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಸರಕಾರದಿಂದ ಒಂದು ಬೆಡ್‌ರೂಂನ ಮನೆಯ ಬದಲಿಗೆ ಎರಡು ಬೆಡ್‌ರೂಂಗಳ ಮನೆ ಬೇಡಿಕೆ ಬಂದಿದೆ. ಜತೆಗೆ ಕೆಲವರು ಗ್ರಾಮೀಣ ಮಟ್ಟದಲ್ಲಿ ಜಾಗ ನೀಡಿದರೆ ಸಾಕು ಎಂಬ ಬೇಡಿಕೆಯನ್ನೂ ಇರಿಸಿದ್ದಾರೆ. ಈ ಬಗ್ಗೆ ಕ್ರಮಗಳು ಸರಕಾರದ ಮಟ್ಟದಲ್ಲಿ ನಡೆಯಲಿದೆ. ಯೋಜನೆ ಮಂಜೂರಾಗಿ ಬಂದು ಹೊಸ ಮನೆ ನಿರ್ಮಾಣದ ಅಪಾಯದಲ್ಲಿರುವ ಮನೆಗಳನ್ನು ಬಿಟ್ಟು ಹೋಗಿರುವರಿಗೆ ತನಕ ಪ್ರತಿ ತಿಂಗಳು ನಿರ್ದಿಷ್ಟ ಬಾಡಿಗೆ ಮೊತ್ತ ನಿಡಲಾಗುವುದು. ಸದ್ಯ ಕಡಲ್ಕೊರೆತದಿಂದ 150 ಮನೆಗಳು ಮತ್ತು ಉಳ್ಳಾಲದಲ್ಲಿ ಬೀಚ್ ಅಭಿವೃದ್ಧಿಯಿಂದ ತೊಂದರೆಗೊಳಗಾಗುವ 40 ಮನೆಗಳಿರುವುದು ಗಮನಕ್ಕೆ ಬಂದಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಬೇರೆಡೆ ಸುಸಜ್ಜಿತವಾದ ಮನೆಗಳಿದ್ದು, ಉಳ್ಳಾಲದ ಸಮುದ್ರ ತೀರದಲ್ಲಿ ನೆಲೆಸಿದವರೂ ಕೆಲವರಿದ್ದಾರೆಂಬ ಆರೋಪಗಳಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಖಾದರ್, ಉತ್ತಮ ವ್ಯವಸ್ಥೆ ಇದ್ದವರಾರೂ ಅಲ್ಲಿ ನೆಲೆಸಿದ್ದಾರೆಂಬ ಆರೋಪವನ್ನು ನಾನು ನಂಬುವುದಿಲ್ಲ. ಹಾಗಿದ್ದರೂ ಅರ್ಹರನ್ನು ಗುರುತಿಸಿಯೇ ಪರಿಹಾರ ವ್ಯಸ್ಥೆ ನಡೆಯಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಎಪಿಎಂಸಿ ಉಪಾಧ್ಯಕ್ಷೆ ಮುತ್ತಕ್ಕ, ಸದಾಶಿವ ಉಳ್ಳಾಲ್, ದಿನೇಶ್ ಪೂಜಾರಿ, ಪಿಯುಸ್ ಮೊಂತೆರೋ ಉಪಸ್ಥಿತರಿದ್ದರು.

ಜೂ.18ರಂದು ಕಂದಾಯ ಸಚಿವರ ಸಭೆ: ಪ್ರಾಪರ್ಟಿ ಕಾರ್ಡ್ ಬಗ್ಗೆ ಸ್ಪಷ್ಟ ಮಾಹಿತಿ

ಜೂ. 18ರಂದು ಕಂದಾಯ ಸಚಿವರು ದ.ಕ. ಮತ್ತು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಉಡುಪಿಯಲ್ಲಿ ಹಾಗೂ ಮಧ್ಯಾಹ್ನದ ಬಳಿಕ ಮಂಗಳೂರಿನಲ್ಲಿ ಅವರು ಪರಿಶೀಲನಾ ಸಭೆ ನಡೆಸಲಿದ್ದಾರೆ.

ಈ ಸಂದರ್ಭ ಪ್ರಾಪರ್ಟಿ ಕಾರ್ಡ್‌ಗೆ ಸಂಬಂಧಿಸಿ ಸ್ಪಷ್ಟವಾದ ಮಾಹಿತಿಯ ಜತೆಗೆ ಇಲಾಖೆಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಸಭೆ ನಡೆಯಲಿದೆ. ಕಡಲ್ಕೊರೆತದಿಂದ ಮನೆಹಾನಿ, ಮನೆ ಕಳೆದುಕೊಂಡವರಿಗೆ ಪರಿಹಾರ ಮೊತ್ತವನ್ನು ಶೀಘ್ರವೇ ನೀಡಲಾಗುವುದು. ಮಳೆ ನಿಂತ ಬಳಿಕ ಶಾಶ್ವತ ತಡೆಗೋಡೆ ಕಾಮಗಾರಿ ಆರಂಭವಾಗಲಿದೆ ಎಂದು ಅವರು ಹೇಳಿದರು.

 

Be the first to comment

Leave a Reply

Your email address will not be published.


*