ಉಡುಪಿ: ಹಿಂದೂ ಸಂಪ್ರದಾಯದಂತೆ ಕಪ್ಪೆಗಳ ಅದ್ದೂರಿ ವಿವಾಹ !

 ಉಡುಪಿಯ ಕಿದಿಯೂರ್ ಹೋಟೆಲಿನ ವಾಹನ ನಿಲು ಗಡೆ ಪ್ರಾಂಗಣದಲ್ಲಿ ಶನಿವಾರ ಹಿಂದೂ ಸಂಪ್ರದಾಯದಂತೆ ಕಾಲು ಉಂಗುರ ತೊಡಿಸಿ, ಮಾಂಗಲ್ಯವನ್ನು ಕಟ್ಟಿ ಕಪ್ಪೆಗಳ ಮದುವೆಯನ್ನು ವಿಜೃಂಭಣೆಯಿಂದ ನೆರವೇರಿಸುವ ಮೂಲಕ ಮಳೆಗಾಗಿ ಪ್ರಾರ್ಥಿಸಲಾಯಿತು.

ಜಲಕ್ಷಾಮದ ನಿವರಾಣಾರ್ಥ ಹಾಗೂ ಮಳೆ ಬರುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಪಂಚರತ್ನಾ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿ ಕೊಳ್ಳಲಾದ ಮಂಡೂಕ ಕಲ್ಯಾಣೋತ್ಸವದಲ್ಲಿ ಕೊಳಲಗಿರಿ ಸಮೀಪದ ಕೀಳಿಂಜೆ ಎಂಬಲ್ಲಿ ಪತ್ತೆಯಾದ ‘ವರ್ಷ’ ಹೆಸರಿನ ಹೆಣ್ಣು ಕಪ್ಪೆ ಮತ್ತು ಉಡುಪಿ ಕಲ್ಸಂಕದಲ್ಲಿ ಪತ್ತೆಯಾದ ‘ವರುಣ’ ಹೆಸರಿನ ಗಂಡು ಕಪ್ಪೆಗೆ ಮದುವೆ ಮಾಡಲಾಯಿತು.

ಇದಕ್ಕೂ ಮೊದಲು ನಗರದ ಮಾರುತಿ ವಿಥಿಕಾದಲ್ಲಿರುವ ನಾಗರಿಕ ಸಮಿತಿಯ ಕಚೇರಿಯಿಂದ ಹೊರಟ ಮದುವೆ ದಿಬ್ಬಣವು ಹಳೆ ಡಯಾನ ವೃತ್ತ, ಕವಿ ಮುದ್ದಣ ಮಾರ್ಗವಾಗಿ ಕಿದಿಯೂರು ಹೊಟೇಲ್‌ಗೆ ಸಾಗಿ ಬಂತು. ತ್ರಿಚಕ್ರ ಸೈಕಲ್‌ನಲ್ಲಿ ಇರಿಸಲಾದ ಪಂಜರದೊಳಗೆ ಕಪ್ಪೆಗಳನ್ನು ಇಟ್ಟು ದಿಬ್ಬಣದಲ್ಲಿ ತರಲಾಯಿತು. ಇದರಲ್ಲಿ ಮಾತೃ ಮಂಡಳಿ ಹಾಗೂ ಭಜನಾ ಮಂಡಳಿಗಳ ಒಕ್ಕೂಟದ ಮಹಿಳೆ ಯರು ಸಂಪ್ರಾದಾಯಿಕ ಉಡುಗೆ ತೊಡುಗೆಗಳೊಂದಿಗೆ ಆಗಮಿಸಿದರು. ಇದಕ್ಕೆ ಚಿಟ್ಪಾಡಿಯ ನಾಸಿಕ್ ಬ್ಯಾಂಡ್ ತಂಡ ದವರು ಸಾಥ್ ನೀಡಿದರು.

ಪುರೋಹಿತರು ಸೂಚಿಸಿದ ಮೂಹುರ್ತದಲ್ಲಿ ಹೆಣ್ಣು ಕಪ್ಪೆಗೆ ಅಮಿತಾ ಗಿರೀಶ್ ಮಲ್ಲಿಗೆ ಹೂವು ಮುಡಿಸಿ, ತಿಲಕ ಹಚ್ಚಿ, ಕಾಲು ಉಂಗುರ ತೊಡಿಸಿ, ಮಾಂಗಲ್ಯ ಕಟ್ಟುವ ಮೂಲಕ ವಿವಾಹ ನೆರವೇರಿಸಿದರು. ಬಳಿಕ ಭಜನಾ ಮಂಡಳಿಯ ಮಹಿಳೆಯರು ಆರತಿ ಎತ್ತಿದರು. ನಂತರ ಪ್ರತೇಕ ಬೋನಿನಲ್ಲಿ ಇರಿಸಲಾದ ಕಪ್ಪೆಯನ್ನು ಒಂದೇ ಬೋನಿನ ಒಳಗೆ ಹಾಕಲಾಯಿತು.

ಜನಾರ್ದನ ಶೇರಿಗಾರ್ ತಂಡದಿಂದ ಸ್ಯಾಕ್ಸೋಫೋನ್ ಹಾಗೂ ಮದುವೆಗೆ ಆಗಮಿಸಿದವರಿಗೆ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ವಿವಾಹ ಮುಗಿದ ಬಳಿಕ ಕಪ್ಪೆಗಳನ್ನು ಮಣಿಪಾಲದ ಮಣ್ಣಪಳ್ಳದ ಕೆರೆಯಲ್ಲಿ ಬಿಡ ಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ತಾರನಾಥ ಮೇಸ್ತ, ಸಂತೋಷ್ ಸರಳಬೆಟ್ಟು, ಗಣೇಶ್‌ರಾಜ್ ಸರಳಬೆಟ್ಟು ಮೊದ ಲಾದವರು ಉಪಸ್ಥಿತರಿದ್ದರು.

‘ನಾಲ್ಕು ಕಪ್ಪೆಗಳನ್ನು ಪತ್ತೆ ಹಚ್ಚಿ ತಂದು, ಮಣಿಪಾಲದ ಜೀವಶಾಸ್ತ್ರ ತಜ್ಞರಿಂದ ಹೆಣ್ಣು ಮತ್ತು ಗಂಡು ಕಪ್ಪೆಗಳನ್ನು ಆಯ್ಕೆ ಮಾಡಲಾಯಿತು. ಈ ಹಿಂದೆ ಎಂದೂ ಕಾಣದ ಜಲಕ್ಷಾಮವನ್ನು ಜಿಲ್ಲೆಯ ಜನತೆ ಎದುರಿಸುತ್ತಿದ್ದಾರೆ. ನೀರಿಗಾಗಿ ಎಲ್ಲ ಕಡೆ ಹಾಹಾಕಾರ ಉಂಟಾಗಿದೆ. ಶೀಘ್ರವೇ ಮಳೆಯ ಆಗಮನ ಆಗಲಿ ಎಂದು ಪ್ರಾರ್ಥಿಸಿ ಕಪ್ಪೆಗಳಿಗೆ ವಿವಾಹ ಮಾಡಿದ್ದೇವೆ’ ಎಂದು ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*