ವಿಷಪೂರಿತ ಹೊಗೆಯಿಂದ ಅನಾರೋಗ್ಯದ ಭೀತಿ

ಮಂಗಳೂರು,ಮೇ17 :ಮಂಗಳೂರಿನ ತ್ಯಾಜ್ಯ ವಿಲೇವಾರಿ ಪ್ರದೇಶ ಪಚ್ಚನಾಡಿಯಲ್ಲಿ ಯಾವಾಗ ತ್ಯಾಜ್ಯಕ್ಕೆ ಬೆಂಕಿ ಬೀಳುತ್ತದೆಯೋ, ಆ ಘಳಿಗೆಯಿಂದ ಅಲ್ಲಿ ವಾಸಿಸುವ ಜನರ ಬದುಕು ನರಕಮಯವಾಗುತ್ತದೆ. ಮೇ.12ರಂದು ರವಿವಾರ ಸಂಜೆ ಕಸದ ರಾಶಿಯ ಒಂದು ಭಾಗಕ್ಕೆ ಬೆಂಕಿ ಬಿದ್ದಿದ್ದು, ಮೇ13ರ ದಿನಪೂರ್ತಿ ಬೆಂಕಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ, ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಯತ್ನಿಸಿದರೂ ಅದು ಫಲ ನೀಡಲಿಲ್ಲ ಎಂದು ತಿಳಿದುಬಂದಿದೆ. ಪರಿಣಾಮ, ವಿಷಪೂರಿತ ಹೊಗೆ ಮತ್ತಷ್ಟು ವ್ಯಾಪಿಸಿ, ಸ್ಥಳೀಯರ ಉಸಿರಾಟಕ್ಕೂ ತೊಂದರೆಯಾಗಿದೆ.

ಮಂಗಳನಗರ, ಮಂಗಳ ಜ್ಯೋತಿ ವ್ಯಾಪ್ತಿಯ ಹಲವು ಮಂದಿ ತ್ಯಾಜ್ಯದ ರಾಶಿಯಿಂದ ಬಂದ ವಿಷಪೂರಿತ ಹೊಗೆಯಿಂದ ಅಸ್ವಸ್ಥರಾಗಿದ್ದಾರೆ. ಮಂಗಳನಗರ ವ್ಯಾಪ್ತಿಯ ಸುಮಾರು 150ಕ್ಕೂ ಅಧಿಕ ಮನೆಯ ಬಹುತೇಕ ಮಂದಿ ಕೆಮ್ಮು, ವಾಂತಿಯಿಂದ ಬಳಲುತ್ತಿದ್ದಾರೆ. ಬಹುತೇಕರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.

ಪಚ್ಚನಾಡಿ ಪ್ರದೇಶದ ಹಲವಾರು ಮಂದಿ ವಿಷಪೂರಿತ ಹೊಗೆಯಿಂದಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ತ್ಯಾಜ್ಯ ವಿಲೇವಾರಿ ಪ್ರದೇಶದ ಸಮೀಪದಲ್ಲಿ ಹಲವಾರು ಕುಟುಂಬಗಳು ವಾಸವಾಗಿದ್ದು, ಉಸಿರಾಟದೊಂದಿಗೆ ದೇಹ ಸೇರುವ ಹೊಗೆಯಿಂದಾಗಿ ಜನರಿಗೆ ಅನಾರೋಗ್ಯ ಭೀತಿ ಉಂಟಾಗಿದೆ.

ಸ್ಥಳೀಯ ಮನೆಯವರು ಶೀತ-ಜ್ವರದಿಂದ ಬಳಲುತ್ತಿದ್ದು, ಅನೇಕರಿಗೆ ಹೊಗೆಯಿಂದಾಗಿ ಗಂಟಲು ಕೆರೆತ ಉಂಟಾಗಿದೆ. ಆದರೆ ತ್ಯಾಜ್ಯ ವಿಲೇವಾರಿ ಘಟಕದಿಂದ ಬಂದ ಹೊಗೆ ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದರೆ ನಂಬುವವರೂ ಇಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಎಷ್ಟು ಮಂದಿ ಅನಾರೋಗ್ಯಕ್ಕೊಳಗಾಗಿರುವರೋ ಗೊತ್ತಿಲ್ಲ. ಆದರೆ ಇದನ್ನು ಸಂಬಂಧಪಟ್ಟವರಲ್ಲಿ ತಿಳಿಸಿದರೆ ಪ್ರತಿ ಬಾರಿಯೂ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.

Be the first to comment

Leave a Reply

Your email address will not be published.


*