ಮೇಷಿನ್ ಬಳಸಿ ಶ್ರೀಮತಿ ಶೆಟ್ಟಿಯ ಶವ ತುಂಡರಿಸಿದ ಕೊಲೆ ಆರೋಪಿ

ಮಂಗಳೂರುಃ ಕಳೆದ ಭಾನುವಾರ ಪಾಂಡೇಶ್ವರ ಮಂಕಿಸ್ಟೇಂಡ್ ನಿವಾಸಿ ಶ್ರೀಮತಿ ಶೆಟ್ಟಿಯನ್ನು ಕೊಂದಿರುವ ಕೊಲೆ ಆರೋಪಿಯು ಆಕೆಯ ಮೃತದೇಹವನ್ನು ತುಂಡರಿಸಲು ಮರ ತುಂಡುವ ಕಟ್ಟಿಂಗ್ ಮೆಷೀನ್ ಬಳಿಸಿರುವುದು ಇದೀಗ ಬೆಳಕಿಗೆ ಬಂದಿದೆ.

ಕಳೆದ ಭಾನುವಾರ ಶ್ರೀಮತಿ ಶೆಟ್ಟಿ ಅವರ ಮೃತದೇಹದ ಭಾಗಗಳು ಮಂಗಳೂರು ನಗರದ ಮೂರು ಕಡೆ ಎಸೆದಿರುವುದು ಕಂಡುಬಂದಿತ್ತು. ಮೂವತ್ತು ಮಂದಿ ಪೊಲೀಸರಿದ್ದ ಮೂರು ತನಿಖಾ ತಂಡಗಳು ಕೊಲೆಯದ ಮಹಿಳೆಯ ಗುರುತು ಪತ್ತೆ ಮಾಡಿ ಅನಂತರ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಕೊಲೆ ಆರೋಪಿಗಳನ್ನು ವೆಲೆನ್ಸಿಯಾ ನಿವಾಸಿ ಜಾನ್ಸನ್(36) ಮತ್ತು ಈತನ ಪತ್ನಿ ವಿಕ್ಟೋರಿಯಾ(46) ಎಂದು ಪತ್ತೆ ಮಾಡಿದ  ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಹಣಕಾಸು ವಹಿವಾಟು ಮತ್ತು ಇಲೆಕ್ಟ್ರಿಕಲ್ ವ್ಯಾಪಾರ ನಡೆಸುತ್ತಿದ್ದ ಶ್ರೀಮತಿ ಶೆಟ್ಟಿಯ ಭೀಕರ ಕೊಲೆ ಮಂಗಳೂರು ನಗರದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಮಾತ್ರವಲ್ಲದೆ, ಪೊಲೀಸರು ಪತ್ತೆ ಮಾಡಿದ ಆಕೆಯ ದೇಹದ ಭಾಗಗಳು ಮತ್ತು ಆಕೆ ಮೃತ ದೇಹದ ರುಂಡ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು.

ನಿಗೂಢ ಕೊಲೆ ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಮ್ಮಿಬ್ಬರು ಡಿಸಿಪಿಗಳ ಸಹಾಯದೊಂದಿಗೆ ಆರೋಪಿಗಳ ಪತ್ತೆಗಾಗಿ ಪೊಲೀಸರ ದೊಡ್ಡ ಪಡೆಯನ್ನೇ ತನಿಖೆಗಾಗಿ ನಿಯೋಜಿಸಿದ್ದರು. ಮಾತ್ರವಲ್ಲದೆ, ಕಂಪ್ಯೂಟರ್ ವಿಭಾಗದ ಸಹಾಯದೊಂದಿಗೆ ತಂತ್ರಜ್ಞಾನವನ್ನು ಸಹಾಯಕವಾಗಿ ಬಳಸಿಕೊಂಡಿದ್ದರು.

ಕೊಲೆಯಾದ ವ್ಯಕ್ತಿಯ ಗುರುತನ್ನು ಪೊಲೀಸರು ಮೊದಲಾಗಿ ಪತ್ತೆ ಮಾಡಬೇಕಾಗಿತ್ತು. ಗುರುತು ಪತ್ತೆ ಮಾಡಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಅನಂತರ ಶ್ರೀಮತಿ ಶೆಟ್ಟಿ ಬಳಸುತ್ತಿದ್ದ ಮೊಬೈಲ್ ಸಂಭಾವ್ಯ ಆರೋಪಿಯ ಪತ್ತೆಗೆ ಗುರುತರವಾದ ಸುಳಿವು ನೀಡಿತ್ತು. ಶ್ರೀಮತಿ ಶೆಟ್ಟಿಯ ಮೊಬೈಲಿನಿಂದ ಪ್ರತಿದಿನ ಹಲವು ಫೋನ್ ಕಾಲ್ ಆರೋಪಿಟಯ ಮೊಬೈಲಿಗೆ ಹೋಗಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.

ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸಲು ಆತನ ಮನೆಗೆ ಹೋದ ಸಂದರ್ಭದಲ್ಲಿ ಆರೋಪಿ ಜಾನ್ಸನ್ ಆತ್ಮಹತ್ಯೆ ಗೆ ಯತ್ನಿಸಿದ್ದ. ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ನಡೆದಾಗ ಮನೆಯಲ್ಲಿದ್ದ ಆತನ ಮಡದಿಯನ್ನು ಕೂಡ ಎರಡನೇ ಆರೋಪಿಯಾಗಿ ಮಾಡಲಾಗಿದೆ.

ಫಾಸ್ಟ್ ಫುಡ್ ಲಾಸ್

ಶ್ರೀಮತಿ ಶೆಟ್ಟಿ ಅವರ ಭೀಕರ ಕೊಲೆಗೆ ಹಣಕಾಸು ವಹಿವಾಟು ಪ್ರಮುಖ ಕಾರಣ ಎಂಬುದು ಪೊಲೀಸರಿಗೆ ಮೇಲ್ನೋಟಕ್ಕೆ ಅರ್ಥವಾಗಿತ್ತು. ಮಂಗಳೂರಿನ ಮಂಗಳಾದೇವಿ ಸಮೀಪ ಮಂಕಿಸ್ಟೇಂಡ್ ಅಮರ ಆಳ್ವ ರಸ್ತೆಯ ನಿವಾಸಿಯಾಗಿದ್ದ ಶ್ರೀಮತಿ ಶೆಟ್ಟಿ ಬಡ್ಡಿ ಸಾಲ ಮತ್ತು ಚೀಟಿ ವ್ಯವಹಾರ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ಖಚಿತವಾಗಿ ಏನನ್ನೂ ಹೇಳುತ್ತಿಲ್ಲ.

ಪೊಲೀಸರು ಆರೋಪಿಯ ಪ್ರಾಥಮಿಕ ವಿಚಾರಣೆ ನಡೆಸಿದಾಗ ಶ್ರೀಮತಿ ಶೆಟ್ಟಿ ಅವರಿಂದ ಪಡೆದುಕೊಂಡಿದ್ದ ಒಂದು ಲಕ್ಷ ರೂಪಾಯಿ ಸಾಲದಲ್ಲಿ ನಲ್ವತ್ತು ಸಾವಿರ ರೂಪಾಯಿ ಸಂದಾಯ ಮಾಡಿದ್ದ. ನಂದಿಗುಡ್ಡೆ ವೃತ್ತದಸಮೀಪದ ಆರೋಪಿ ನಡೆಸುತ್ತಿದ್ದ ಫಾಸ್ಟ್ ಫುಡ್ ಜಾಯಿಂಟ್ ಲಾಸ್ ಆದ ಪರಿಣಾಮ ಆತನಿಗೆ ಸಾಲ ಹಿಂತಿರುಗಿಸಲು ಸಾಧ್ಯ ಆಗಿರಲಿಲ್ಲ.

ಬಾಕಿ ಉಳಿದಿರುವ ಆರುವತ್ತು ಸಾವಿರ ರೂಪಾಯಿ ಹಿಂದಿರುಗಿಸುವಂತೆ ಶ್ರೀಮತಿ ಶೆಟ್ಟಿ ಪದೇ ಪದೇ ಆತನಿಗೆ ಫೋನ್ ಮಾಡುತ್ತಿದ್ದಳು. ಸಾಲದ ವಿಚಾರದಲ್ಲಿ ಒಂದೆರಡು ಬಾರಿ ಜಗಳವೂ ನಡೆದಿತ್ತು. ಕೊಲೆಯಾದ ದಿನ ಶನಿವಾರ ನತದೃಷ್ಟೆ ಶ್ರೀಮತಿ ಶೆಟ್ಟಿ ನೇರವಾಗಿ ಆತನ ಮನೆಗೆ ಹೋಗಿದ್ದಳು.

ಶನಿವಾರ ಬೆಳಗ್ಗೆ ಮನೆಗೆ ಆಗಮಿಸಿದ ಶ್ರೀಮತಿ ಶೆಟ್ಟಿ ಮತ್ತು ಆರೋಪಿ ಜಾನ್ಸನ್ ನಡುವೆ ಜಗಳವಾಗಿತ್ತು. ಅನಂತರ ನಡೆದ ಹೊಡೆದಾಟದಲ್ಲಿ ಶ್ರೀಮತಿ ಶೆಟ್ಟಿ ಬಿದ್ದಿರುವ ಮಾರಣಾಂತಿಕ ಏಟಿಗೆ ಆಕೆ ಸತ್ತು ಬಿದ್ದಿದ್ದಳು. ಹಿಂದೊಮ್ಮೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಜಾನ್ಸನ್ ವಿಚಲಿತನಾಗಲಿಲ್ಲ. ಆದರೆ, ಆಕೆಯ ಮೃತದೇಹವನ್ನು ಹೊರಗೆ ಬಿಸಾಡುವುದೇ ದೊಡ್ಡ ಸವಾಲಾಗಿತ್ತು.

ರುಂಡ, ಮುಂಡ, ಕಾಲುಗಳನ್ನು ಬೇರ್ಪಡಿಸಲು ಆರೋಪಿಯು ಕಟುಕನಾಗಿ ಮರ ಕೊಯ್ಯುವ ಕಟ್ಟಿಂಗ್ ಮೆಷಿನ್ ಬಳಕೆ ಮಾಡಿದ್ದ. ಶನಿವಾರ ರಾತ್ರಿ ಹೊತ್ತು ಆಕೆಯ ದೇಹದ ಭಾಗಗಳನ್ನು ಮೂರು ಕಟೆ ಬಿಸುಟು ಹೋಗಿದ್ದ. ಮರುದಿನ ಬೆಳಗ್ಗೆ ಎರಡು ಕಡೆ ಮಹಿಳೆಯ ದೇಹದ ಭಾಗಗಳು ಪತ್ತೆ ಆಗಿತ್ತು. ಅನಂತರ ಮೂರನೇ ಸ್ಥಳದಲ್ಲಿ ಕಾಲು ಪತ್ತೆ ಆಗಿತ್ತು.

ಕೊಲೆಯಾದ ಮಹಿಳೆಯ ದೇಹದಲ್ಲಿದ್ದ ಆರು ಉಂಗುರ ಮತ್ತು ಒಂದು ಚಿನ್ನದ ಸರವನ್ನು ಆರೋಪಿಯು ತೆಗೆದಿರಿಸಿದ್ದಾನೆ. ದ್ವಿಚಕ್ರ ವಾಹನನದಲ್ಲಿ ಶವದ ಭಾಗಗಳನ್ನು ಬಿಸಾಡಲು ಯಾರಾದರು ಸಹಾಯ ಮಾಡಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶವವನ್ನು ಬಿಸಾಡಿದ ಅನಂತರ ದ್ವಿಚಕ್ರ ವಾಹನವನ್ನು ಆತ ಸ್ನೇಹಿತ ಮನೆಯ ಸನಿಹ ನಿಲ್ಲಿಸಿದ್ದ. ಇದೀಗ ಆ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published.


*