ಅಡ್ವಾಣಿಯವರನ್ನು ರಾಜಕೀಯದಿಂದಲೇ ದೂರಗೊಳಿಸುವಂತೆ ಮಾಡಿದ ಮೋದಿಯವರು ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ-ಸಿ.ಎಂ.ಇಬ್ರಾಹಿಂ

ಎರಡು ಹಂತದಲ್ಲಿ ಇಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಯಾವುದೇ ಸಾಧನೆ ಮಾಡಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಮಿಥುನ್ ರೈ ಪರ ಮತ ಚಲಾಯಿಸುವ ಮೂಲಕ ಕಟೀಲ್ ಸಾಹೇಬ್ರನ್ನು ಪಿಟೀಲು ಬಾರಿಸಲು ಕಳುಹಿಸಿ ಹಾಗೂ ಮಿಥುನ್ ರೈರನ್ನು ಪಾರ್ಲಿಮೆಂಟ್‍ಗೆ ಕಳುಹಿಸಿ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಅವರು ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಿದ್ದು ಅಡ್ವಾಣಿ, ಆದರೆ ಅಡ್ವಾಣಿಯವರನ್ನು ರಾಜಕೀಯದಿಂದಲೇ ದೂರಗೊಳಿಸುವಂತೆ ಮಾಡಿದ ಮೋದಿಯವರು ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ. 45 ವರ್ಷದಿಂದ ರಾಜಕೀಯ ಮಾಡಿದ್ದೇನೆ ಇಷ್ಟು ಸಮಯದಲ್ಲಿ ನಾವು ಯಾರಿಗೂ ಹೆದರಿಲ್ಲ. ಇನ್ನು ಮೋದಿಗಲ್ಲ ಮೋದಿಯ ಅಪ್ಪನಿಗೂ ಹೆದರುವವರು ನಾವಲ್ಲ ಎಂದರು.
ಮಂತ್ರಾಲಯಕ್ಕೆ ರಾಘವೇಂದ್ರ ಸ್ವಾಮಿಗಳ ಯಾತ್ರೆ ಹೋದಾಗ ಅಲ್ಲಿ ಬೃಂದಾವನ ನಿರ್ಮಾಣಕ್ಕೆ ಜಾಗ ಕೊಟ್ಟವರು ಅದೋನಿ ನವಾಬ ಸಾಹೇಬರು. ಇದೇ ಮಾತನ್ನು ಉಡುಪಿಯ ಅಷ್ಠಮಠದ ಸ್ವಾಮೀಜಿಗಳೂ ಒಪ್ಪಿಕೊಂಡಿದ್ದರು. ಶೃಂಗೇರಿಯ ಶಾರದಾ ಪೀಠಕ್ಕೆ ರಕ್ಷಣೆ ನೀಡಿದ್ದು ಟಿಪ್ಪು ಸುಲ್ತಾನ್ ಎಂಬುದನ್ನು ಆರ್ ಎಸ್‍ಎಸ್‍ನವರು, ಪ್ರಭಾಕರ ಭಟ್ ಅರ್ಥ ಮಾಡಿಕೊಳ್ಳಬೇಕು. ಅಂದರೆ ಭಾರತದಲ್ಲಿ ಹಿಂದಿನಿಂದಲೂ ಸೌಹಾರ್ದತೆಯ ವಾತಾವರಣ ಇತ್ತು. ಆದರೆ ಈಗ ಜಾತಿ ರಾಜಕೀಯ ಮಾಡುತ್ತಿದ್ದಾರೆ. ಈಶ್ವರಪ್ಪನವರು ಮುಸ್ಲಿಮರಿಗೆ ಸೀಟು ಕೊಡುವುದಿಲ್ಲ ಎಂದರು. ಈಶ್ವರಪ್ಪರ ಸೀಟ್ ಮುಸ್ಲಿಮರಿಗೆ ಬೇಕಾಗಿಲ್ಲ. ಮುಸ್ಲಿಮರಿಗೆ ಬೇಕಾದದ್ದು ಪಾರ್ಲಿಮೆಂಟಿನಲ್ಲಿ ಸ್ಥಾನವಲ್ಲ, ಆರೂವರೇ ಕೋಟಿ ಮುಸ್ಲಿಮರ ಹೃದಯದಲ್ಲಿ ಸ್ಥಾನ ಸಿಕ್ಕರೆ ಸಾಕಾಗುತ್ತದೆ ಎಂದರು.

ಸಚಿವೆ ಜಯಾಮಾಲಾ ಮಾತನಾಡಿ, ದೇಶದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಸರಿಯಾದ ಮಾರುಕಟ್ಟೆ ಇಲ್ಲದೆ ಕಗ್ಗಂಟಿನಲ್ಲಿದ್ದಾರೆ. ಈ ಸಂದರ್ಭ ಬಿಜೆಪಿಯವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ನಮಗೆ ಜಾತಿ ರಾಜಕಾರಣವಲ್ಲ ಮನುಷ್ಯ ರಾಜಕಾರಣ ಬೇಕು. ಮನ್‍ಮೋಹನ್ ಸಿಂಗ್ ಸರ್ಕಾರ 72 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾಮಾಡಿದ್ದರು. ಹಾಗೆಯೇ ಸಿದ್ದರಾಮಯ್ಯ, ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿ ರೈತರ ಪರ ನಿಂತಿದ್ದಾರೆ. ಆದರೆ ಮೋದಿ ಸರ್ಕಾರ ರೈತರ ಪರ ಯಾವುದೇ ಯೋಜನೆ ಹಾಕದೆ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ, ಎಂ.ಬಿ.ಸದಾಶಿವ, ಟಿ.ಎಸ್.ಅಬ್ದುಲ್ಲಾ ಸಾಮಣಿಗೆ, ಕಣಚೂರು ಮೋನು, ಇಬ್ರಾಹಿಂ ಕೋಡಿಜಾಲ್, ವಿಜಯ ವಿಠಲನಾಥ ಶೆಟ್ಟಿ, ಪದ್ಮನಾಭ ನರಿಂಗಾನ, ಮಹಮ್ಮದ್ ಮೋನು, ಅಬ್ದುಲ್ ರಹಿಮಾನ್ ಕೋಡಿಜಾಲ್, ಮುಸ್ತಫಾ ಹರೇಕಳ, ನಾಸೀರ್ ಸಾಮಣಿಗೆ, ರವೂಫ್ ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

Be the first to comment

Leave a Reply

Your email address will not be published.


*