ನಳಿನ್ ಎದುರು ರೈ ಸ್ಪರ್ಧೆ : ದ.ಕ.ದಲ್ಲಿ ಘಟಾನುಘಟಿ ನಾಯಕರ ಫೈಟ್?

ಮಂಗಳೂರು: ಪ್ರತಿಷ್ಠಿತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಸಿಲಿನ ಬೇಗೆಯ ಜೊತೆಗೆ ಚುನಾವಣೆಯ ಕಾವೂ ಏರಲಾರಂಭಿಸಿದೆ. ಮೂರನೇ ಬಾರಿಗೆ ಸಂಸತ್ ಗೆ ಆಯ್ಕೆ ಬಯಸಿ ಭಾರತೀಯ ಜನತಾ ಪಕ್ಷದಿಂದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಣದಲ್ಲಿದ್ದಾರೆ. ಇತ್ತ ನಳಿನ್ ಅವರಿಗೆ ಸೂಕ್ತ ಪ್ರತಿಸ್ಪರ್ಧಿಯನ್ನು ಹುಡುಕುವಲ್ಲಿ ಕಾಂಗ್ರೆಸ್ ಪಕ್ಷ ತಲೆಕೆಡಿಸಿಕೊಳ್ಳುತ್ತಿದೆ. ಮೈತ್ರಿ ಒಪ್ಪಂದಂತೆ ದ.ಕ. ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಪಾಲಾಗಿದೆ ಹಾಗಾಗಿ ಇಲ್ಲಿ ನಳಿನ್ ಕುಮಾರ್ ಕಟೀಲ್ ಎದುರು ಸೂಕ್ತ ಅಭ್ಯರ್ಥಿಯನ್ನು ಹಾಕುವ ಹೊಣೆ ಈಗ ‘ಕೈ’ ಪಾಲಿಗಿದೆ.

ಮಾಜೀ ಸಚಿವ ಮತ್ತು ಜಿಲ್ಲೆಯ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ರಮಾನಾಥ ರೈ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಉಳಿದಂತೆ ಬಿ.ಕೆ. ಹರಿಪ್ರಸಾದ್, ರಾಜೇಂದ್ರ ಕುಮಾರ್ ಮುಂತಾದವರ ಹೆಸರುಗಳೂ ಸಹ ಕೇಳಿಬರುತ್ತಿವೆ. ಆದರೆ ಕಾಂಗ್ರೆಸ್ ಮೂಲಗಳ ಪ್ರಕಾರ ಈ ಬಾರಿ ನಳಿನ್ ಎದುರಾಳಿಯಾಗಿ ಮಾಜಿ ಸಚಿವರಾದ ರಮಾನಾಥ ರೈ ಅವರ ಹೆಸರು ‘ಫೈನಲ್’ ಆಗಿದೆ ಎನ್ನಲಾಗುತ್ತಿದೆ.

ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಮಾನಾಥ ರೈ ಅವರಿಗೆ ಅಪಪ್ರಚಾರಗಳಿಂದ ಅಪಜಯವಾಗಿತ್ತು. ಆದರೆ ಈ ಬಾರಿ ಪ್ರಭಾವಿ ಸಂಸದ ನಳಿನ್ ಅವರನ್ನು ಎದುರಿಸಲು ಹಿರಿಯ ರಾಜಕಾರಣಿಯೇ ಸೂಕ್ತ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಿದೆ ಎನ್ನಲಾಗುತ್ತಿದ್ದು ರಮಾನಾಥ ರೈ ಅವರಿಗೆ ಸ್ಪರ್ಧಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ. ಈ ಕುರಿತಾದ ಪ್ರಕಟನೆಯಷ್ಟೇ ಬಾಕಿಯಿದೆ ಎಂಬ ಮಾಹಿತಿಯೂ ಸ್ಥಳೀಯ ಕಾಂಗ್ರೆಸ್ ಮೂಲಗಳಿಂದ ಲಭ್ಯವಾಗಿದೆ. ಒಂದುವೇಳೆ ನಳಿನ್ ಕುಮಾರ್ ಎದುರಾಗಿ ರಮಾನಾಥ ರೈ ಸ್ಪರ್ಧಿಸುವುದೇ ಆದಲ್ಲಿ ದಕ್ಷಿಣ ಕನ್ನಡ ಚುನಾವಣಾ ಕಣ ಇನ್ನಷ್ಟು ರಂಗು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

 

Be the first to comment

Leave a Reply

Your email address will not be published.


*