ಪೌರಾಡಳಿತ ಸಚಿವ ಸಿ.ಎಸ್,ಶಿವಳ್ಳಿ ಇನ್ನಿಲ್ಲ

ಧಾರವಾಡ: ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮೈತ್ರಿ ಸರಕಾರದ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ (೫೭) ತೀವ್ರ ಹೃದಯಾಘಾತದಿಂದ ಮೃತರಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಶಿವಳ್ಳಿಯವರು ಧಾರವಾಡ ಕಟ್ಟಡ ಕುಸಿತ ದುರಂತದ ಸ್ಥಳದಲ್ಲಿ ಇದ್ದು, ಕಾರ್ಯಾಚರಣೆ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇಂದು ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡ ಕೂಡಲೇ ಹುಬ್ಬಳ್ಳಿಯ ಲೈಫ್ ಲೈನ್ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಳ್ಳಿಯವರು ನಿಧನ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಸಂತಾಪ ಸೂಚಿಸಿದ ಸಚಿವ ಯು.ಟಿ.ಖಾದರ್ ಶಾಸಕ,ಸಚಿವರಾಗಿದ್ದ ಸಮಯದಲ್ಲಿ ಅತ್ಯಂತ ಆತ್ಮೀಯರಾಗಿದ್ದ ಶಿವಳ್ಳಿ ಪ್ರತಿ ಯೋಜನೆಗಳು ಮಂಡಿಸುವಾಗಲು ಬಹಳಷ್ಟು ಬಾರಿ ಚರ್ಚಿಸಿದ್ದೇವೆ.ಅಂತಹ ಉತ್ತಮ ವ್ಯಕ್ತಿಯ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ ಮತ್ತು ಕುಟುಂಬಕ್ಕೆ ಅವರ ಅಗಲುವಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದರು.

ಸಂಬಂಧಿಕರು, ಅಭಿಮಾನಿಗಳ ದುಖ ಮುಗಿಲು ಮುಟ್ಟಿದ್ದು, ಆಸ್ಪತ್ರೆಯ ಎದುರು ಸಾವಿರಾರು ಜನ ಸೇರುತ್ತಿದ್ದಾರೆ.

ಚೆನ್ನಬಸಪ್ಪ ಸತ್ಯಪ್ಪ ಶಿವಳ್ಳಿ ಅವರು ೧೯೯೯ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಕುಂದಗೋಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ೨೦೧೩, ೨೦೧೮ ರಲ್ಲಿ ಕಾಂಗ್ರೆಸ್ ಮೂಲಕ ಶಾಸಕರಾಗಿದ್ದರು. ಮೂರು ಬಾರಿಗೆ ಕುಂದಗೋಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸಿ ಎಸ್ ಶಿವಳ್ಳಿಯವರು ಕುಮಾರಸ್ವಾಮಿಯವರ ಮೈತ್ರಿ ಸರಕಾರದಲ್ಲಿ ಪೌರಾಡಳಿತ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ಬಡವರ ಬಂಧು: ಬಡ ಕುಟುಂಬದ ಹಿನ್ನಲೆಯಿಂದ ರಾಜಕೀಯ ಪ್ರವೇಶ ಮಾಡಿದ್ದ ಶಿವಳ್ಳಿಯವರು, ಕುಂದಗೋಳ ಕ್ಷೇತ್ರದಲ್ಲಿ ಬಡವರಿಗೆ ವೈಯಕ್ತಿಕವಾಗಿಯೂ ಸಹಾಯ ಮಾಡುತ್ತಿದ್ದರು. ಸರಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸುವ ಅವರ ಕಾರ್ಯ ವೈಖರಿಯಿಂದ ಕ್ಷೇತ್ರದಲ್ಲಿ ‘ಬಡವರ ಬಂಧು’ ಎಂದೇ ಹೆಸರಾಗಿದ್ದರು.

ಸಿಎಂ ಗೌರವ: ಹಾಸನದಲ್ಲಿ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನದ ಸುದ್ದಿ ತಿಳಿದು ಮೌನ ಪ್ರಾರ್ಥನೆ ನಡೆಸಿ ಗೌರವ ಸಲ್ಲಿಸಿದರು.

ನಾಳೆ ಅಂತಿಮ ಸಂಸ್ಕಾರ: ಸಚಿವ ಸಿ.ಎಸ್.ಶಿವಳ್ಳಿ ಅವರ ಅಂತಿಮ ಸಂಸ್ಕಾರ ಶನಿವಾರ ಮಧ್ಯಾಹ್ನ ಹುಟ್ಟೂರು ಯರಗುತ್ತಿಯಲ್ಲಿ ನಡೆಯಲಿದೆ. ಸಂಜೆ ೬ ಗಂಟೆಗೆ ಕುಂದಗೋಳದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ೯ ಗಂಟೆಯ ನಂತರ ಶಿವಳ್ಳಿಯವರ ಹುಟ್ಟೂರು ಯರಗುತ್ತಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಮಧ್ಯಾಹ್ನದ ನಂತರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Be the first to comment

Leave a Reply

Your email address will not be published.


*