ಮುಂಬಯಿ ಬಸ್ಸಿನ ಎಮರ್ಜನ್ಸಿ ಬಾಗಿಲಿನಿಂದ ರಸ್ತೆಗೆ ಬಿದ್ದು ಮಹಿಳೆಗೆ ಗಂಭೀರ ಗಾಯ

ಸ್ಲೀಪರ್ ಕೋಚ್ ಬಸ್ಸಿನ ತುರ್ತು ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡ ಪರಿಣಾಮ ಮುಂಬಯಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿರುವ ಘಟನೆ ಕಟಪಾಡಿ ಶಿರ್ವ ರಸ್ತೆಯ ಬಂಟಕಲ್ಲು ಬಿ.ಸಿ ರೋಡ್ ಬಳಿ ನಡೆದಿದೆ.
ಶರ್ಮಿಳಾ ಪ್ರಭು ನಾಯಕ್ ಗಾಯಗೊಂಡಿರುವವರು.ಬೆಳ್ಮಣ್ ಪಿಲಾರುಖಾನದಿಂದ ಮಾ.೧೪ರ ಅಪರಾಹ್ನ ೨.೨೦ ಗಂಟೆ ಸುಮಾರಿಗೆ ಮುಂಬಯಿಗೆ ಹೋಗಲು ಶೀತಲ್ ಟ್ರಾವೆಲ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.ರಸ್ತೆ ತಿರುವಿನಲ್ಲಿ ಇದ್ದಕ್ಕಿದ್ದಂತೆ ತೆರೆದುಕೊಂಡ ಪರಿಣಾಮ ಬಾಗಿಲಿನ ಬಳಿಯ ಸೀಟಿನಲ್ಲಿದ್ದ ಮಹಿಳೆ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.ಮಹಿಳೆಯ ಜತೆಗಿದ್ದ ೬ ವರ್ಷದ ಮಗುವೂ ಬೀಳಿವಿದರಿಲ್ಲಿದ್ದಾಗ ಪಕ್ಕದಲ್ಲಿದ್ದ ಮಹಿಳೆಯ ಪತಿ ಮಗುವಿನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ಬೊಬ್ಬೆ ಹಾಕಿದ್ದರಿಂದ ಚಾಲಕ ಬ್ರೇಕ್ ಹಾಕುವಷ್ಟರಲ್ಲಿ ಸುಮಾರು ನೂರು ಮೀಟರ್ ಚಲಿಸಿಯಾಗಿತ್ತು.ಬಸ್ ನಿಲ್ಲಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮಹಿಳೆಯನ್ನು ನರ್ಸಿಂಗ್ ಹೋಮ್ಗೆ ದಾಖಲಿಸಿದ ಬಸ್ ನಿರ್ವಾಹಕರು ಆಸ್ಪತ್ರೆಯ ಸಂಪೂರ್ಣ ಖರ್ಚು ಭರಿಸುವುದಾಗಿ ಭರವಸೆ ನೀಡಿದ್ದರು.ಎರಡು ದಿನಗಳ ನಂತರ ಬಂದ ಬಸ್ ಮಾಲಿಕ ಮಾತ್ರ ಬಿಲ್ ಪಾವತಿಸದೆ ಕೈಕೊಟ್ಟರು.ಮೋಸ ಹೋದ ಮಹಿಳೆಯ ಪತಿ ನಿಶಿಕಾಂತ್ ನಾಯಕ್ ದೂರು ನೀಡಿದ್ದು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಸ್ ಮಾಲಕರ ಹಾಗೂ ನಿರ್ವಾಹಕರ ಅಸಡ್ಡೆ ಹಾಗೂ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

 

 

Be the first to comment

Leave a Reply

Your email address will not be published.


*