ಅಪಪ್ರಚಾರದ ಅಮಲಲ್ಲಿ ಅಪಘಾತಕ್ಕೊಳಗಾದ ಕಳಪೆ ಚಿತ್ರ- ’ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’

ವಿವಾದ, ತೀವ್ರ ಟೀಕೆಗೊಳಗಾದ ನಂತರ ವಿಜಯ್ ಗುಟ್ಟೆ ನಿರ್ದೇಶನದ, ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ (ಬಹುಷ ೨.೦ ಹ್ಯಾಂಗೋವರ್ ನಲ್ಲಿ?) ನಟಿಸಿರುವ ಚಿತ್ರ ’ದ ಆಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಇಂದು ತೆರೆ ಕಂಡಿದೆ. ’ದ ಆಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಟ್ರೈಲರ್ ಬಿಡುಗಡೆಯಾದಾಗಲೇ ಚಿತ್ರವು ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧದ ಅಪಪ್ರಚಾರಕ್ಕಾಗಿ ಮಾಡಿರುವ ಸಿದ್ಧಸೂತ್ರವೆನ್ನುವುದು ಸ್ಪಷ್ಟವಾಗಿದ್ದರೂ, ಚಿತ್ರ ವೀಕ್ಷಿಸಿದ ನಂತರ ಇದು ಚಿತ್ರವಲ್ಲ, ಬದಲಾಗಿ ಅಪಪ್ರಚಾರಗಳನ್ನು ಪೋಣಿಸಿ ತೆಗೆದಿರುವ ದೃಶ್ಯಗಳ ಸರಣಿ ಎಂಬುದು ಸ್ಪಷ್ಟವಾಗುತ್ತದೆ.

ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ಕೆಟ್ಟದಾಗಿ ತೋರಿಸುವಲ್ಲಿ ತೋರಿದ ಉತ್ಸಾಹವನ್ನು ನಿರ್ದೇಶಕರು ಚಿತ್ರಕಥೆಯ ಮೇಲೆಯೂ ವಹಿಸಿದ್ದರೆ ಇದನ್ನು ಚಿತ್ರ ಎನ್ನಬಹುದಿತ್ತು. ಯುಪಿಎ ಅಧಿಕಾರವಧಿಯಲ್ಲಿ ಮನಮೋಹನ್ ಸಿಂಗ್ ’ರಬ್ಬರ್ ಸ್ಟ್ಯಾಂಪ್’ ಆಗಿದ್ದರು, ಆಡಳಿತವನ್ನು ಸೋನಿಯಾ ಗಾಂಧಿಯವರೇ ನಿರ್ವಹಿಸುತ್ತಿದ್ದರು ಎನ್ನುವ ಸುಳ್ಳನ್ನೇ ’ದ ಆಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಆರಂಭದಿಂದ ಕೊನೆವರೆಗೆ ತೋರಿಸಲಾಗಿದೆ.

ಚಿತ್ರಕಥೆಯಲ್ಲಿ ನಿರ್ದೇಶಕರು ಸಂಪೂರ್ಣವಾಗಿ ಎಡವಿದ್ದು, ಒಂದು ದೃಶ್ಯದ ನಂತರ ಮತ್ತೊಂದು ದೃಶ್ಯ. ಮಗದೊಂದು ದೃಶ್ಯ . ಹೀಗೆ ಸಾಗುತ್ತದೆ ಹೊರತು ಪ್ರೇಕ್ಷಕ ಕೊನೆವರೆಗೂ ಈ ಅಪಪ್ರಚಾರದ ಸರಣಿಯೊಂದಿಗೆ ’ಕನೆಕ್ಟ್’ ಆಗುವುದಿಲ್ಲ.

ಚಿತ್ರದ ಮತ್ತೊಂದು ಮೈನಸ್ ಪಾಯಿಂಟ್ ಎಂದರೆ ಅನುಪಮ್ ಖೇರ್. ಚಿತ್ರದಲ್ಲಿ ಅವರು ನಟಿಸಿದ್ದಾರೋ, ಅಥವಾ ರಜಿನಿಕಾಂತ್ ಅಭಿನಯದ ೨.೦ ಚಿತ್ರದ ಹ್ಯಾಂಗೋವರ್ ನೊಂದಿಗೆ ಸೆಟ್ ಗೆ ಬಂದು ಅದನ್ನು ಅನುಕರಿಸಿದ್ದಾರೋ ಒಂದೂ ಗೊತ್ತಾಗುವುದಿಲ್ಲ. ’ದ ಆಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ನುದ್ದಕ್ಕೂ ಅವರು ರೊಬೊಟ್ ನಂತೆಯೇ ಕಾಣಿಸುತ್ತಾರೆ, ನಟಿಸುತ್ತಾರೆ, ನಡೆಯುತ್ತಾರೆ. ಅವರ ಮಾತುಗಳೂ ಕೂಡ ಪ್ರೇಕ್ಷಕನಿಗೆ ಕಿರಿಕಿರಿಯೆನಿಸುತ್ತದೆ. ಇನ್ನು ಸಂಜಯ ಬಾರು ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ ನಟನೆಯೂ ಪ್ರೇಕ್ಷಕನಿಗೆ ಇಷ್ಟವಾಗುವುದಿಲ್ಲ. ’ದ ಆಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ನಲ್ಲಿರುವ ಪ್ರೇಕ್ಷಕನಿಗೆ ಇಷ್ಟವಾಗಬಹುದಾದ ಅಂಶವೆಂದರೆ ನಟರ ಮುಖಗಳು ನೈಜ ಪಾತ್ರಗಳನ್ನು ಸ್ವಲ್ಪವಾದರೂ ಹೋಲುವುದು.

ಚಿತ್ರದ ಮೂಲಕ ನಿರ್ದೇಶಕ ಏನು ಹೇಳಲು ಹೊರಟಿದ್ದಾರೆ ಎನ್ನುವುದು ಸ್ಪಷ್ಟವಾಗದಿದ್ದರೂ ಜನಸಾಮಾನ್ಯನಿಗೆ ಒಂದಂತೂ ಸ್ಪಷ್ಟವಾಗುತ್ತದೆ.. ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿವೆ.

Be the first to comment

Leave a Reply

Your email address will not be published.


*