ಪ್ರೊ.ಇಚ್ಲಂಗೋಡುರವರ ‘ಬ್ಯಾರಿ ಒಗಟುಗಳು’ ಕೃತಿ ಅನಾವರಣ

ಮಂಗಳೂರು, ಜ.12: ಪ್ರೊ.ಬಿ.ಎಂ.ಇಚ್ಲಂಗೋಡು ಅವರ ಬ್ಯಾರಿ ಒಗಟುಗಳ ಸಂಕಲನವನ್ನು ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅನಾವರಣಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿರುವ ಒಗಟುಗಳು ಇಂದು ಮರೆಯಾಗುತ್ತಿದ್ದು, ಅದನ್ನು ಉಳಿಸುವ ಪ್ರಯತ್ನ ಈ ಸಂಕಲನದಿಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಕಲನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಪ್ರೊ.ಬಿ.ಎಂ.ಇಚ್ಲಂಗೋಡು, ಕರ್ನಾಟಕದ ಭಾಷೆಗಳಲ್ಲಿ ಹೇರಳವಾಗಿರುವ ಒಗಟುಗಳ ಬಗ್ಗೆ ಈವರೆಗೂ ಸಂಶೋಧನೆ ಅಥವಾ ಅಧ್ಯಯನ ನಡೆದಿಲ್ಲ. ಈ ಒಗಟುಗಳು ಜನಪದ ಸಾಹಿತ್ಯವಾಗಿದ್ದು, ಇಲ್ಲಿ ರೂಪಕ ಅಲಂಕಾರದ ಜತೆಯಲ್ಲಿ ಇದನ್ನು ಸಾಹಿತ್ಯಿಕವಾದ ನೆಲೆಯಲ್ಲಿ ಗುರುತಿಸಿಕೊಳ್ಳಲಾಗಿದೆ ಎಂದರು.

ಒಗಟುಗಳಲ್ಲಿ ಗೂಡಾರ್ಥವಿದೆ, ದ್ವಂದ್ವವಿದೆ. ಈ ವಿಶೇಷತೆಯಿಂದಾಗಿಯೇ ಇದು ಕಲೆಯಾಗಿಯೂ ಗುರುತಿಸಿಕೊಂಡಿದೆ. ಹಿಂದೆ ವಿನೋದದ ಮಾಧ್ಯಮವಾಗಿದ್ದ ಈ ಒಗಟುಗಳು ಕೃಷಿ, ಜನಜೀವನ, ನಡವಳಿಕೆಗೆ ಸಂಬಂಧಿಸಿ ಬುದ್ಧಿವಂತಿಕೆಯನ್ನು ಉಪಯೋಗಿಸಿ ಪ್ರಶ್ನೆ ಹಾಗೂ ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಕಲೆಯಾಗಿ ಬೆಳೆದಿದೆ. ಕರ್ನಾಟಕದ ವಿವಿಧ ಭಾಷೆಗಳಲ್ಲಿ ಕಾಣಿಸಿಕೊಳ್ಳುವ ಒಗಟುಗಳು ಇತರ ಯಾವುದೇ ಭಾಷೆಗಳಲ್ಲಿ ವಿರಳ ಎಂದು ಹೇಳಿದ ಅವರು, ಈ ಒಗಟುಗಳ ಸಂರಕ್ಷಣೆಯು ಜಾಣ್ಮೆ ಹೆಚ್ಚಿಸುವುದಲ್ಲದೆ ಮುಂದಿನ ಪೀಳಿಗೆಗೆ ಹೊಸ ಜಾಗೃತಿಯನ್ನು ಮೂಡಿಸಲು ಸಹಕಾರಿ ಎಂದು ಹೇಳಿದ್ದಾರೆ.

ಸಾಹಿತಿ ಅಬ್ದುರ್ರಹ್ಮಾನ್ ಕುತ್ತೆತ್ತೂರು ಉಪಸ್ಥಿತಿಯಲ್ಲಿ ನಡೆದ ಸಂಕಲನ ಅನಾವರಣ ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಕಾರ್ಯದರ್ಶಿ ಜೀವನ ಮತ್ತು ಸದಸ್ಯ ಶೀತಲ್ ಕುಮಾರ್ ಭಾಗವಹಿಸಿದ್ದರು.

 

Be the first to comment

Leave a Reply

Your email address will not be published.


*