ದುಬೈ ಉದ್ಯಮಿಗಳೊಂದಿಗೆ ರಾಹುಲ್ ಗಾಂಧಿ ಸರಣಿ ಸಭೆ..!

ದುಬೈ: ಅರಬ್ ರಾಷ್ಟ್ರಗಳ ಪ್ರವಾಸದಲ್ಲಿರೋ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇಂದು ಹಲವು ಉದ್ಯಮಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಉದ್ಯಮಿಗಳೊಂದಿಗೆ ಬ್ರೇಕ್ ಫಾಸ್ಟ್ ಮಾಡಿದ ರಾಹುಲ್ ಗಾಂಧಿ, ಮುಂಬರುವ ಲೋಕಸಭಾ ಚುನಾವಣೆ ಕುರಿತು ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ರಾಹುಲ್ ಗಾಂಧಿ ಪಾಲ್ಗೊಂಡಿದ್ದ ಸಭೆಯಲ್ಲಿ ಮತ್ತೊಬ್ಬ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಕೂಡ ಪಾಲ್ಗೊಂಡಿದ್ದು ಹಲವು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

ದುಬೈನಲ್ಲಿ ರಾಹುಲ್ ಗಾಂಧಿ ಎನ್‌ಆರ್‌ಐ ಮತಬೇಟೆ
ಲೋಕಸಭೆ ಚುನಾವಣೆಗೆ ಸರ್ವ ರೀತಿಯಲ್ಲೂ ಸಿದ್ಧವಾಗುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಎರಡು ದಿನಗಳ ಅರಬ್ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ಮಾತಿನ ಮೋಡಿ ಮೂಲಕ ಅನಿವಾಸಿ ಭಾರತೀಯರ ಮನ ಸೆಳೆಯಲು ಯತ್ನಿಸಿದ ಅವರು, ‘೨೦೧೯ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳ ಅರಬ್ ಪ್ರವಾಸದಲ್ಲಿ ಶುಕ್ರವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೇರುವ ಮೂಲಕ ಭಾರತವನ್ನು ಏಕತೆಯೆಡೆಗೆ ಕೊಂಡೊಯ್ಯುವುದು ಸಿದ್ಧ ಎಂದು ಹೇಳಿದರು.

ಮೊದಲ ಬಾರಿಗೆ ದುಬೈ ಪ್ರವಾಸ ಮಾಡಿರುವ ಅವರು ಇದಕ್ಕೂ ಮೊದಲು ಜಬೇಲ್ ಅಲಿ ಕಾರ್ಮಿಕ ಕಾಲೋನಿಗೆ ಭೇಟಿ ನೀಡಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ‘ನಾನು ನನ್ನ ಮನದ ಮಾತು (ಮನ್ ಕಿ ಬಾತ್) ಹೇಳುವ ಬದಲಾಗಿ, ನಿಮ್ಮ ಮನದ ಮಾತನ್ನು ಕೇಳಲು ಬಂದಿದ್ದೇನೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಯುಎಇ ಅಭಿವೃದ್ಧಿಯಲ್ಲಿ ಕಾರ್ಮಿಕರ ಪರಿಶ್ರಮವನ್ನು ಶ್ಲಾಘಿಸಿದ ರಾಹುಲ್ ಗಾಂಧಿ ಅವರು, ದುಬೈನಲ್ಲಿ ನಿರ್ಮಾಣವಾಗಿರುವ ಬೃಹತ್ ಮೆಟ್ರೋ, ವಿಮಾನ ನಿಲ್ದಾಣಗಳು ಹಾಗೂ ಗಗನ ಚುಂಬಿ ಕಟ್ಟಡಗಳ ಹಿಂದೆ ನಿಮ್ಮ ಕೊಡುಗೆ ಅಪಾರವಾಗಿದೆ. ಈ ದೇಶದ ಅಭಿವೃದ್ಧಿಗಾಗಿ ನಿಮ್ಮ ಬೆವರು, ರಕ್ತ ಹರಿಸಿದ್ದೀರಿ. ಈ ಮೂಲಕ ಹಿಂದೂಸ್ತಾನದ ಹೆಸರು ಪ್ರಜ್ವಲಿಸುವಂತೆ ಮಾಡಿದ್ದೀರಿ ಎಂದು ಅನಿವಾಸಿ ಭಾರತೀಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದಿಂದ ಇಷ್ಟುದೂರ ಬಂದು ದಿನಪೂರ್ತಿ ಕೆಲಸ ಮಾಡಿ, ನಿಮ್ಮ ಕುಟುಂಬಗಳಿಗೆ ಹಣ ಕಳುಹಿಸುತ್ತೀರಿ. ಇಲ್ಲಿಯ ಕಾರ್ಮಿಕರ ಸಮಸ್ಯೆಗಳ ಕುರಿತು ಕಾಂಗ್ರೆಸ್ ಪಕ್ಷಕ್ಕೆ ಅರಿವಿದೆ. ನಿಮಗೆ ಸಹಾಯ ಮಾಡಲು ಬಯಸುತ್ತೇವೆ. ನಾನು ನಿಮ್ಮಂತೆ ಸಾಮಾನ್ಯ ವ್ಯಕ್ತಿ. ನಿಮ್ಮ ಸಹಾಯಕ್ಕಾಗಿ ಸದಾ ಸಿದ್ಧನಿರುತ್ತೇನೆ ಎಂದು ಭರವಸೆ ನೀಡಿದರು.

ಗುರುವಾರ ರಾತ್ರಿಯೇ ದುಬೈ ತಲುಪಿದ್ದ ರಾಹುಲ್ ಗಾಂಧಿ, ಶುಕ್ರವಾರ ದುಬೈ ಪ್ರವಾಸ ಹಾಗೂ ಶನಿವಾರ ಅಬುಧಾಬಿ ಪ್ರವಾಸ ಕೈಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ದುಬೈನಲ್ಲಿ ನಡೆಸಿದ ಸಭೆಯಲ್ಲಿ ಅನಿವಾಸಿ ಭಾರತೀಯ ಉದ್ಯಮಿಗಳಾದ ಎನ್‌ಆರ್‌ಐ ಉದ್ಯಮಿ ಬಿ.ಆರ್. ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಮಾಲೀಕ ಪ್ರವೀಣ್ ಶೆಟ್ಟಿಸೇರಿದಂತೆ ೨೦೦ ಉದ್ಯಮಿಗಳು ಭಾಗವಹಿಸಿದ್ದರು. ಬಳಿಕ ಯುಎಇ ಪ್ರಧಾನಮಂತ್ರಿ ಷೇಕ್ ಮಹಮ್ಮದ್ ಜತೆ ರಾಹುಲ್ ಮಾತುಕತೆ ನಡೆಸಿದರು.

ಸ್ಟೇಡಿಯಂ ಸಂಪೂರ್ಣ ಭರ್ತಿ:

ಈ ಬಗ್ಗೆ ಪ್ರತಿಕ್ರಿಯಿಸಿರುವ ಅನಿವಾಸಿ ಕಾಂಗ್ರೆಸ್‌ನ ಕಾರ್ಯದರ್ಶಿ ಬೆಂಗಳೂರು ಮೂಲದ ಆರತಿ ಕೃಷ್ಣನ್, ದುಬೈ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಪ್ರವಾಹ ಹರಿದುಬಂದಿದೆ. ಸ್ಟೇಡಿಯಂ ಭರ್ತಿಯಾಗಿ ಹೊರ ಭಾಗದಲ್ಲಿ ೨೦ ಸಾವಿರಕ್ಕೂ ಹೆಚ್ಚು ಜನ ಇದ್ದರು. ವಿವಿಧ ಸಂಘಟನೆಗಳು ಹಾಗೂ ಅನಿವಾಸಿ ಕಾಂಗ್ರೆಸ್ ಪ್ರಯತ್ನ ಯಶಸ್ವಿಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಕೂಡಲೆ ಆಂಧ್ರಕ್ಕೆ ವಿಶೇಷ ಮಾನ್ಯತೆ ನೀಡುವುದು ಖಚಿತ\

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಕೈಜೋಡಿಸಿ ಜಯ ಸಾಧಿಸಿದರೆ ಖಂಡಿತವಾಗಿಯೂ ಆಂಧ್ರಪ್ರದೇಶಕ್ಕೆ ವಿಶೇಷ ಮಾನ್ಯತೆ ಒದಗಿಸಿಕೊಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ದುಬೈನಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಲು ಆಂಧ್ರದ ಜನರು ಸಹಕಾರ ನೀಡಿದರೆ ಅವರಿಗೆ ಬೇಕಾದ ವಿಶೇಷ ಮಾನ್ಯತೆಯನ್ನು ನೀಡುವ ಹೊಣೆಯನ್ನು ನಾವು ಹೊರುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಕೂಡಲೆ ಆಂಧ್ರಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಲಿದ್ದೇವೆ ಎಂದು ಹೇಳಿದ್ದಾರೆ.

೨೦೧೪ರಲ್ಲಿ ಆಂಧ್ರಪ್ರದೇಶದ ಮತ್ತು ತೆಲಂಗಾಣ ಎಂದು ಎರಡು ರಾಜ್ಯಗಳಾಗಿ ವಿಂಗಡಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ತನಗೆ ವಿಶೇಷ ಸಾಂವಿಧಾನಿಕ ಮಾನ್ಯತೆ ಸಿಗಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರಿತ್ತು. ಆದರೆ, ಆ ಬೇಡಿಕೆ ಇನ್ನೂ ಈಡೇರಿಲ್ಲ. ಎನ್‌ಡಿಎ ಸರ್ಕಾರ ಈ ಬೇಡಿಕೆಯನ್ನು ಈಡೇರಿಸಲು ಒಪ್ಪದ ಕಾರಣ ತೆಲುಗು ದೇಶಂ ಪಾರ್ಟಿ ಎನ್‌ಡಿಎ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿತ್ತು.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಜಂತರ್ ಮಂತರ್‌ನಲ್ಲಿ ಆಂಧ್ರಪ್ರದೇಶದ ಜನರು ತಮಗೆ ವಿಶೇಷ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದರು. ಆಗ ಅಲ್ಲಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ೨೦೧೯ರಲ್ಲಿ ನಾವು ಅಧಿಕಾರಕ್ಕೆ ಬಂದ ಕೂಡಲೆ ಮಾಡುವ ಮೊದಲ ಕಾರ್ಯವೇ ನಿಮಗೆ ವಿಶೇಷ ಮಾನ್ಯತೆ ಸಿಗುವಂತೆ ಮಾಡುವುದು ಎಂದು ಹೇಳಿಬಂದಿದ್ದರು. ನಾವೆಲ್ಲ ಒಗ್ಗಟ್ಟಾಗಿ ನಿಂತರೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಂಧ್ರಪ್ರದೇಶದ ಜನರ ಸಾಮರ್ಥ್ಯವೇನು ಮತ್ತು ಅವರಿಗೆ ಸರ್ಕಾರದಿಂದ ಏನು ಸಿಗಬೇಕೆಂಬುದನ್ನು ಅರ್ಥ ಮಾಡಿಸಲು ಸಾಧ್ಯವಿದೆ. ಹಾಗೇ, ಆಂಧ್ರದ ಜನರ ವಿರೋಧ ಕಟ್ಟಿಕೊಂಡರೆ ಏನಾಗುತ್ತದೆ ಎಂಬುದನ್ನೂ ಬಿಜೆಪಿಗೆ ಅರ್ಥ ಮಾಡಿಸಲು ಒಂದೊಳ್ಳೆ ಅವಕಾಶ ಸಿಕ್ಕಿದೆ ಎಂದು ರಾಹುಲ್ ಹೇಳಿದ್ದರು.

ಭಾರತ ಅಸಹಿಷ್ಣುತೆಯನ್ನು ಅನುಭವಿಸುತ್ತಿದೆ:

ಯುಎಇಯಲ್ಲಿ ಮಾತನಾಡುವಾಗ ಅಸಹಿಷ್ಣುತೆಯ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ಯುಎಇಯಲ್ಲಿ ಸಹಿಷ್ಣುತೆಯನ್ನು ಕಾಣುತ್ತಿದ್ದೇನೆ. ಅದೇ ನನ್ನ ದೇಶದಲ್ಲಿ ಅಸಹಿಷ್ಣುತೆಗೆ ಸಾಕ್ಷಿಯಾಗುತ್ತಿದ್ದೇವೆ. ಕಳೆದ ನಾಲ್ಕೂವರೆ ವರ್ಷಗಳಿಂದಲೂ ನಾವು ಈ ಅಸಹಿಷ್ಣುತೆಯನ್ನು ಅನುಭವಿಸುತ್ತಲೇ ಇದ್ದೇವೆ ಎಂದು ಹೇಳಿದ್ದಾರೆ.

ಒಬ್ಬರ ಯೋಚನೆ ಮಾತ್ರ ಸರಿ, ಉಳಿದವರೆಲ್ಲ ಮೂರ್ಖರು ಎಂಬಂತಹ ಮನಸ್ಥಿತಿಯಿರುವ ಕೈಯಲ್ಲಿ ದೇಶವನ್ನು ಕೊಟ್ಟು ಭಾರತವನ್ನು ಮುನ್ನಡೆಸಲು ಸಾಧ್ಯವೇ ಇಲ್ಲ. ನನ್ನ ಪ್ರೀತಿಯ ದೇಶವಾದ ಭಾರತ ಇಂದು ರಾಜಕೀಯ ಕುತಂತ್ರಗಳಿಂದಾಗಿ ಇಬ್ಭಾಗವಾಗಿಹೋಗಿದೆ.

ಬಿಜೆಪಿಯವರು ’ಕಾಂಗ್ರೆಸ್ ಮುಕ್ತ ಭಾರತ’ ನಿರ್ಮಾಣ ಮಾಡಬೇಕೆಂದು ಅಭಿಯಾನ ಮಾಡುತ್ತಿದ್ದಾರೆ. ಆದರೆ, ನಮಗೆ ’ಬಿಜೆಪಿಮುಕ್ತ ಭಾರತ’ ಬೇಕಾಗಿಲ್ಲ. ನಮಗೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಮೊದಲು ನಾನೊಬ್ಬ ಭಾರತೀಯ, ಆಮೇಲೆ ಉಳಿದಿದ್ದೆಲ್ಲ ಎಂದು ಹೇಳುವಂತಾಗಬೇಕು. ಅಂತಹ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಬೇಕೆಂಬುದು ನಮ್ಮ ಗುರಿ ಎಂದಿದ್ದಾರೆ.

ಗಾಂಧೀಜಿ ಕೂಡ ಎನ್‌ಆರ್‌ಐ:

ಅನಿವಾಸಿ ಭಾರತೀಯರ ( ಎನ್‌ಆರ್‌ಐ) ಸಹಕಾರವಿಲ್ಲದೆ ಭಾರತವನ್ನು ಮುನ್ನಡೆಸಲು ಸಾಧ್ಯವಿಲ್ಲ. ಕಳೆದ ಶತಮಾನದಲ್ಲಿ ಭಾರತೀಯರು ಎದ್ದುನಿಂತು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆದುಕೊಂಡರು. ಈ ಹೋರಾಟದ ನೇತೃತ್ವ ವಹಿಸಿದ್ದ ಮಹಾತ್ಮಾ ಗಾಂಧೀಜಿ ಕೂಡ ಓರ್ವ ಎನ್‌ಆರ್‌ಐ. ಅವರು ಇಡೀ ದೇಶದ ಜನರನ್ನು ಒಗ್ಗೂಡಿಸಿ ಅಹಿಂಸೆಯ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ಸಿಗುವಂತೆ ಮಾಡಿದರು. ಹಿಂಸೆಯಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬುದು ಎಲ್ಲ ದೇಶಗಳಿಗೂ, ಎಲ್ಲ ಧರ್ಮಗಳಿಗೂ ಅನ್ವಯವಾಗುವ ಬಹುದೊಡ್ಡ ಸತ್ಯ ಎಂದು ಹೇಳಿದರು.

ನಮ್ಮ ದೇಶದ ಭವಿಷ್ಯ ಎನ್‌ಆರ್‌ಐಗಳ ಭವಿಷ್ಯದ ನಡುವೆ ಸಂಬಂಧವಿದೆ. ಬೇರೆ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಖುಷಿಯಾಗಿಲ್ಲದಿದ್ದರೆ, ತೊಂದರೆ ಅನುಭವಿಸುತ್ತಿದ್ದರೆ ಭಾರತ ಕೂಡ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ತಾಳ್ಮೆ, ಸಹೋದರತ್ವ, ಅಹಿಂಸೆಗಳೆಲ್ಲ ನಮ್ಮ ರಕ್ತದಲ್ಲೇ ಬಂದಿದೆ. ನಾವು ನಮ್ಮ ದೇಶದ ಅಭಿವೃದ್ಧಿಗೆ ಮಾತ್ರ ನೀಲನಕ್ಷೆ ರೂಪಿಸಿಕೊಂಡಿಲ್ಲ. ಇಡೀ ವಿಶ್ವದ ಅಭಿವೃದ್ಧಿಯ ನೀಲನಕ್ಷೆ ರೂಪಿಸುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.


Be the first to comment

Leave a Reply

Your email address will not be published.


*