ವಿಜಯ ಬ್ಯಾಂಕ್ ವಿಲೀನಕ್ಕೆ ವಿರೋಧ: ಪುತ್ತೂರಿನಲ್ಲಿ ಕಾಂಗ್ರೆಸ್‍ನಿಂದ ಪ್ರತಿಭಟನೆ

ಪುತ್ತೂರು,ಜ.10: ದ.ಕ.ಜಿಲ್ಲೆ ಮೂಲದ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ವಿಜಯ ಬ್ಯಾಂಕನ್ನು ಗುಜರಾತ್‍ನ ದೇನಾ ಹಾಗೂ ಬರೋಡಾ ಬ್ಯಾಂಕ್‍ನೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ದಾರದ ವಿರುದ್ಧ ಕಾಂಗ್ರೆಸ್ ವತಿಯಿಂದ ಪುತ್ತೂರಿನ ಎಲ್ಲಾ 7 ವಿಜಯ ಬ್ಯಾಂಕ್ ಶಾಖಾ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪುತ್ತೂರಿನ ಕುಂಬ್ರ, ಕಾವು, ಈಶ್ವರಮಂಗಲ, ಬೆಟ್ಟಂಪಾಡಿ, ದರ್ಬೆ ಮತ್ತು ಪುತ್ತೂರು ವಿಜಯ ಬ್ಯಾಂಕ್ ಶಾಖಾ ಕಚೇರಿ ಮುಂಬಾಗದಲ್ಲಿ ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯ ತನಕ ಪ್ರತಿಭಟನೆ ನಡೆಸಲಾಯಿತು.

ಪುತ್ತೂರಿನಲ್ಲಿ ನಡೆಸ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ನಮ್ಮ ಜಿಲ್ಲೆಯ ಸ್ವಾಭಿಮಾನದ ಸಂಕೇತವಾದ ವಿಜಯ ಬ್ಯಾಂಕನ್ನು ಎ.ಬಿ. ಶೆಟ್ಟಿ ಯವರು ಮದ್ರಾಸ್ ಪ್ರಾಂತ್ಯದ ಸಚಿವರಾಗಿದ್ದ ಸಂದರ್ಭದಲ್ಲಿ ಸ್ಥಾಪಿಸಿದ್ದು, ಬಳಿಕ ಸುಂದರ್ ರಾಮ್ ಶೆಟ್ಟಿಯವರು ಮುಂದುವರಿಸಿದ್ದರು. ಈ ಬ್ಯಾಂಕ್ ಭೂಸುಧಾರಣಾ ಕಾಲಘಟ್ಟದಲ್ಲಿ ಜಿಲ್ಲೆಯಲ್ಲಿ ಆರ್ಥಿಕ ಮಟ್ಟ ಕಡಿಮೆಯಿದ್ದ ಸಂದರ್ಭದಲ್ಲಿ ಎಲ್ಲಾ ಬಡವರು, ಅವಿದ್ಯಾವಂತರಿಗೆ ಆರ್ಥಿಕ ಶಕ್ತಿ, ಸ್ವಾವಲಂಭನೆಯನ್ನು ನೀಡಿದೆ. ಇದೀಗ ಈ ಬ್ಯಾಂಕ್ ಅತ್ಯಧಿಕ ಲಾಭದೊಂದಿಗೆ ಆರ್ಥಿಕವಾಗಿ ಉತ್ತುಂಗ ಸ್ಥಿತಿಯಲ್ಲಿದೆ. 3 ಸಾವಿರ ಕೋಟಿಗಿಂತಲೂ ಅಧಿಕ ನಷ್ಟದಲ್ಲಿದ್ದು ದಿವಾಳಿತನ ಹೊಂದಿರುವ ದೇನಾ ಬ್ಯಾಂಕ್ ಮತ್ತು ಬರೋಡಾ ಬ್ಯಾಂಕ್‍ನೊಂದಿಗೆ ಮರ್ಜಿ ಮಾಡುವ ಹುನ್ನಾರ ನಡೆಯುತ್ತಿದೆ. ವಿಲೀನ ಪ್ರಕ್ರಿಯೆ ಮುಂದುವರಿಸಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಸದಸ್ಯ ಎಂ.ಬಿ. ವಿಶ್ವನಾಥ ರೈ ಪುಡಾದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಅರ್ಶದ್ ದರ್ಬೆ, ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಹನೀಫ್ ಮಾಡಾವು, ಜಿಲ್ಲಾ ಇಂಟಕ್ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ, ಪುತ್ತೂರು ತಾಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು ಮಾತನಾಡಿ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಸಾಹಿರ ಜುಬೇರ್, ಹರೀಶ್ ಕುಮಾರ್ ನಿಡ್ಪಳ್ಳಿ, ಕೆ.ಎಂ. ಅಬ್ದುಲ್ಲ ಕೂರ್ನಡ್ಕ, ಸನತ್‍ಕುಮಾರ್ ರೈ ಏಳ್ತಾಡ್‍ಗುತ್ತು., ಅಬ್ದುಲ್ ರಹಿಮಾನ್ ಆಝಾದ್ ದರ್ಬೆ, ನಗರಸಭಾ ಸದಸ್ಯರಾದ ಶಕ್ತಿ ಸಿನ್ಹಾ, ಯೂಸುಫ್ ಡ್ರೀಮ್, ಶೈಲಾ ಪೈ, ದಿಲೀಪ್ ಕುಮಾರ್ ಮೊಟ್ಟೆತ್ತಡ್ಕ, ನಿರಂಜನ ರೈ ಮಠಂತಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*