ಶಬರಿಮಲೆ ವಿವಾದ: ಕಾಸರಗೋಡಿನಲ್ಲಿ ಹರತಾಳಕ್ಕೆ ಉತ್ತಮ ಪ್ರತಿಕ್ರಿಯೆ

ಕಾಸರಗೋಡು, ಜ.3: ಶಬರಿಮಲೆ ದೇಗುಲಕ್ಕೆ 40ರ ಹರೆಯದ ಮಹಿಳೆಯರಿಬ್ಬರ ಪ್ರವೇಶವನ್ನು ವಿರೋಧಿಸಿ ಶಬರಿಮಲೆ ಸಂರಕ್ಷಣಾ ಸಮಿತಿ, ಬಿಜೆಪಿ ಹಾಗೂ ಸಂಘ ಪರಿವಾರ ಕರೆ ನೀಡಿರುವ ಕೇರಳ ಹರತಾಳಕ್ಕೆ ಕಾಸರಗೋಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬುಧವಾರ ರಾತ್ರಿ ಮತ್ತು ಇಂದು ಬೆಳಗ್ಗೆ ಕೆಲವೆಡೆ ಅಹಿತಕರ ಘಟನೆಗಳು ನಡೆದಿರುವುದು ವರದಿಯಾಗಿದೆ.

ಜಿಲ್ಲೆಯಲ್ಲಿ ಖಾಸಗಿ, ಸರಕಾರಿ ಸಾರಿಗೆ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕೆಲವೇ ಕೆಲವು ಖಾಸಗಿ ವಾಹನಗಳು ರಸ್ತೆಗಿಳಿದಿವೆ. ಮಂಗಳೂರು- ಕಾಸರಗೋಡು ನಡುವಿನ ಸರಕಾರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಜಿಲ್ಲೆಯ ಕೆಲವೆಡೆ ಇಂದು ಬೆಳಗ್ಗೆ ರಸ್ತೆ ತಡೆ ಮಾಡಲಾಗಿತ್ತು. ಬಳಿಕ ಸ್ಥಳಕ್ಕೆ ತೆರಳಿದ ಪೊಲೀಸರು ತಡೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

ಅಹಿತಕರ ಘಟನೆ ನಡೆಯದಂತೆ ಜಲ್ಲಾದ್ಯಂತ ಪೊಲೀಸರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ

ಈ ನಡುವೆ ನೀಲೇಶ್ವರದಲ್ಲಿ ಬಿಜೆಪಿ ಕಚೇರಿ ಕಿಡಿಗೇಡಿಗಳು ಧ್ವಂಸಗೈದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಕಚೇರಿಯ ಪೀಠೋಪಕರಣ ಹಾಗೂ ಪಕ್ಷದ ಸಾಮಗ್ರಿಗಳಿಗೆ ಹಾನಿ ಎಸಗಿ ಎಲ್ಲೆಡೆ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೆರಿಯ ಕಲ್ಲಿಯಾಟ್ ನಲ್ಲಿ ಎ.ಕೆ.ಜಿ. ಮಂದಿರವನ್ನು ಹಾನಿಗೊಳಿಸಲಾಗಿದೆ.

Be the first to comment

Leave a Reply

Your email address will not be published.


*