ಕನ್ನಡ ಚಿತ್ರರಂಗದ ಹಿರಿಯ ನಟ ಸಿ.ಎಚ್​. ಲೋಕನಾಥ್​ ಅವರು ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಸಿ.ಎಚ್​. ಲೋಕನಾಥ್​ ಅವರು ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಸರಿ ಸುಮಾರು 90 ವರ್ಷ ವಯಸ್ಸಿನವರಾಗಿದ್ದ ಅವರು ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಂದು ತಮ್ಮ ನಿವಾಸದಲ್ಲೇ ಅವರು ಕೊನೆಯುಸಿರೆಳಿದ್ದಾರೆ. ಇಂದು ಮದ್ಯಾಹ್ನ 11 ರಿಂದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು.

ಲೋಕನಾಥ್​ ಅವರ ಬಗ್ಗೆ ಕನ್ನಡದ ಹಿರಿಯ ನಟ ಲೋಕನಾಥ್​ ಅವರು 14.08.1927ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದರು. ತಂದೆ ಹನುಮಂತಪ್ಪ, ತಾಯಿ ಗೌರಮ್ಮ. ಅವರು ಎಂಜಿನಿಯರಿಂಗ್‌ ಪದವೀದರರು. ಅವರ ಕುಟುಂಬ ಅದಾಗಲೇ ವಾಣಿಜ್ಯ ವಹಿವಾಟಿನಲ್ಲಿ ತೊಡಗಿಸಿಕೊಂಡಿತ್ತು. ತಮ್ಮ 14 ನೇ ವಯಸ್ಸಿಗೇ ಲೋಕನಾಥ್​ ಅವರು ವಾಣಿಜ್ಯ ವ್ಯವಹಾರಗಳಲ್ಲಿ ತೊಡಿಸಿಕೊಂಡಿದ್ದರು. ಜವಳಿ ಖರೀದಿಗೆಂದು ಅವರು ಬೆಂಗಳೂರು – ಅಮೃತಸರ, ಬನಾರಸ್‌ ಮಧ್ಯೆ ಓಡುತ್ತಿದ್ದರು. ಈ ಮಧ್ಯೆ ವ್ಯಾಯಾಮ ಕಲಿಯಲೆಂದು ಕೆ.ವಿ. ಅಯ್ಯರ್ ಅವರೊಂದಿಗೆ ಲೋಕನಾಥ್​ ಸೇರಿದ್ದರು. ಲೋಕನಾಥ್​ರ ಗಡಸು ಧ್ವನಿಯನ್ನು ಗಮನಿಸಿದ್ದ ಕೆ.ವಿ ಅಯ್ಯರ್​, ಅವರನ್ನು ನಾಟಕಕ್ಕೆ ಪರಿಚಯಸಿದ್ದರು. 1952 ರಲ್ಲಿ ರವಿ ಕಲಾವಿದರು ಸಂಸ್ಥೆ ಸೇರಿದ ಅವರ ಅಭಿನಯಿಸಿದ ಮೊದಲ ನಾಟಕ ‘ಬಂಡವಾಳವಿಲ್ಲದ ಬಡಾಯಿ’.

ಸಂಪ್ರದಾಯಸ್ಥ ಕುಟುಂಬದ ವಿರೋಧದ ನಡುವೆ ರಂಗಭೂಮಿ ಪ್ರವೇಶ ಮಾಡಿದ್ದ ಅವರು, ರವಿಕಲಾವಿದರು ಸಂಸ್ಥೆಯಲ್ಲಿ ‘ರಕ್ತಾಕ್ಷಿ’, ‘ವಿಗಡವಿಕ್ರಮರಾಯ’, ‘ಬಿರುದಂತೆಂಬರ ಗಂಡ’, ‘ಬಹದ್ದೂರ್ ಗಂಡು’, ‘ಬಿಡುಗಡೆ’, ‘ಚಂದ್ರಹಾಸ’, ‘ಮನವೆಂಬ ಮರ್ಕಟ’ ಎಂಬ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಖ್ಯಾತಿ ಪಡೆದಿದ್ದರು.

ರಂಗಭೂಮಿಯ ಹಿನ್ನೆಲೆಯನ್ನಿಟ್ಟುಕೊಂಡೇ ಚಿತ್ರರಂಗ ಪ್ರವೇಶಿಸಿದ್ದ ಅವರು, ಗೆಜ್ಜೆ ಪೂಜೆ, ಬಂಗಾರದ ಮನುಷ್ಯ, ದೂರದ ಬೆಟ್ಟ, ಭೂತಯ್ಯನ ಮಗ ಅಯ್ಯು, ಶರಪಂಜರ, ನಾಗರಹಾವು, ಬಂಗಾರದ ಪಂಜರ, ಮಿಂಚಿನ ಓಟ, ಹೊಸ ನೀರು.. ಹೀಗೆ 650 ಚಿತ್ರಗಳಲ್ಲಿ ಅಭಿನಯಿಸಿದ್ದರು. ಭೂತಯ್ಯನ ಮಗ ಅಯ್ಯು ಮತ್ತು ಮಿಂಚಿನ ಓಟದಲ್ಲಿನ ಅವರ ಅಭಿನಯ ಎಲ್ಲರ ಮನಸೂರೆಗೊಳಿಸಿತ್ತು. ಆರ್ಯಭಟ ಪ್ರಶಸ್ತಿ, ಉತ್ತಮ ಪೋಷಕ ನಟ, ನಾಟಕ ಅಕಾಡಮಿ ಪ್ರಶಸ್ತಿ, ಸಂಘಸಂಸ್ಥೆಗಳಿಂದ ಸನ್ಮಾನ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

Be the first to comment

Leave a Reply

Your email address will not be published.


*