ರಾಷ್ಟ್ರಪತಿ ಕೋವಿಂದ್ ಉಡುಪಿಗೆ ಆಗಮನ: ಪೇಜಾವರ ಮಠಕ್ಕೆ ಭೇಟಿ

ಉಡುಪಿ, ಡಿ. ೨೭: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಪೂರ್ವಾಹ್ನ ೧೧:೩೫ಕ್ಕೆ ಆದಿ ಉಡುಪಿ ಹೆಲಿಪ್ಯಾಡ್‌ಗೆ ಆಗಮಿಸಿದರು.

ಸನ್ಯಾಸ್ಯಾಶ್ರಮ ಸ್ವೀಕರಿಸಿ ೮೦ ವರ್ಷಗಳನ್ನು ಪೂರೈಸಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದು, ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನಕ್ಕಾಗಿ ಅವರು ಇದೇ ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡುತಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆದಿಉಡುಪಿ ಹೆಲಿಪ್ಯಾಡ್‌ಗೆ ಆಗಮಿಸಿದ ರಾಷ್ಟ್ರಪತಿಗಳು, ಅಪರಾಹ್ನ ಪೇಜಾವರ ಮಠಕ್ಕೆ ತೆರಳಿ ಪೇಜಾವರಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನಂತರ ಶ್ರೀಕೃಷ್ಣ ಮಠಕ್ಕೆ ತೆರಳಿ ಕೃಷ್ಣ-ಮುಖ್ಯಪ್ರಾಣರ ದರ್ಶನ ಪಡೆಯುವರು. ನಂತರ ಅವರು ಮಂಗಳೂರಿಗೆ ನಿರ್ಗಮಿಸುವ ಕಾರ್ಯಕ್ರಮವಿದೆ.

ಅವರಿಗೆ ರಾಜ್ಯಪಾಲ ವಾಜುಭಾಯಿ ರುದಾಭಾಯಿ ವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಎಸ್‌ಪಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ರಾಷ್ಟ್ರಪತಿಯನ್ನು ಸ್ವಾಗತಿಸಿದರು.

ಬಳಿಕ ನೇರವಾಗಿ ರಥಬೀದಿಗೆ ಆಗಮಿಸಿದ ರಾಷ್ಟ್ರಪತಿ ೧೧:೪೨ಕ್ಕೆ ಪೇಜಾವರ ಮಠಕ್ಕೆ ಆಗಮಿಸಿದರು.

 

Be the first to comment

Leave a Reply

Your email address will not be published.


*