ಸಂಘ ರಾಜಕೀಯ ಸಂಘಟನೆ, ಸಾಂಸ್ಕೃತಿಕ ಸಂಘಟನೆಯಲ್ಲಃ ಮಹೇಂದ್ರ ಕುಮಾರ್

 

ಮಂಗಳೂರುಃ ಹಿಂದುತ್ವ,ಹಿಂದೂ ಧರ್ಮ, ದೇವರು,ದೇಶಭಕ್ತಿ ಮುಂತಾದುವುಗಳ ಬಗ್ಗೆ ಅಮಾಯಕ ಜನರ ತಲೆಗೆ ಸುಳ್ಳು ಹಾಗೂ ದ್ವೇಷ ತುಂಬಿಸಿ ಸಮಾಜದಲ್ಲಿ ಅರಾಜಕತೆಯನ್ನು ಸೃಷ್ಠಿಸುವ ಆರ್.ಎಸ್.ಎಸ್, ವಿ.ಎಚ್.ಪಿ, ಭಜರಂಗದಳ ಹಿಂದೂಗಳ ಏಳಿಗಾಗಿ ಇರುವ ಉದ್ದೇಶ ಹೊಂದಿರದೆ, ರಾಜಕೀಯ ಲಾಭ ಪಡೆಯುವುದು ಇವುಗಳ ಉದ್ದೇಶ ಎಂದು ಬಜರಂಗದಳ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹೇಳಿದರು.

ಮಂಗಳೂರಿನ ಶಾಂತಿ ಕಿರಣದಲ್ಲಿ ಆಯೋಜನೆಯಾಗಿರುವ ಜನನುಡಿ -2018 ಸಮಾವೇಶದ ಎರಡನೇ ದಿನವಾದ ಭಾನುವಾರ ಹೊರಳು ನೋಟ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ರಾಜಕೀಯವಾಗಿ ಮೇಲೆ ಬರಲು ಏನೆಲ್ಲಾ ಕಸರತ್ತು ಮಾಡುತ್ತದೆ. ಬಿಜೆಪಿ ಬತ್ತಳಿಕೆಯಲ್ಲಿ ಎಲ್ಲವೂ ಖಾಲಿಯಾದಾಗ ಅಯೋಧ್ಯೆ ವಿಚಾರ ಮುನ್ನೆಲೆಗೆ ಬರುತ್ತದೆ. ಕೊನೆಗೆ ಇದೇ ಗತಿ ಎಂದರು.

ಸಂಘ ಪರಿವಾರದದಿಂದ ದೂರವಾದ ಬಗ್ಗೆ ಹಲವು ಘಟನೆಗಳನ್ನು ಪ್ರಸ್ತಾಪಿಸಿದ ಅವರು, ಸಂಘಪರಿವಾರದಲ್ಲಿರುವ ಜಾತಿ ಅಸ್ಪೃಶ್ಯತೆ ನಾನು ಸಂಘ ಸಿದ್ದಾಂತದಿಂದ ವಿಮುಖನಾಗಲೊಂದು ಕಾರಣ ಎಂದರು. ದಲಿತರು ಕೇವಲ ದಾಳಗಳಾಗಿ ಸಂಘ ಪರಿವಾರಕ್ಕೆ ಬೇಕು. ಗಲಾಟೆ ಮಾಡಲು, ಜೈಲಿಗೆ ಹೋಗಲು ಹಿಂದುಳಿದವರು ಬೇಕು. ಜನರನ್ನು ಉದ್ರೇಕಿಸಿ ತೆರಳುವ ಮುಖಂಡರು ಗಲಾಟೆ ನಡೆಸುವ ಸಂದರ್ಭದಲ್ಲಿ ಅಲ್ಲಿರುವುದೇ ಇಲ್ಲ. ಜೈಲಿಗೆ ಹೋಗುವವರು ಇದೇ ಹಿಂದುಳಿದ, ದಲಿತ ಹುಡುಗರೇ ಆಗಿರುತ್ತಾರೆ ಎಂದರು.

ಮುಸ್ಲಿಂ ಹುಡುಗನಿಂದ‌ ಹಿಂದೂ ಹುಡುಗಿ ಅತ್ಯಾಚಾರಕ್ಕೊಳಗಾದರೆ ಸಂಘಕ್ಕೆ ಆಗುವಷ್ಟು ಖುಷಿ ಯಾರಿಗೂ ಆಗಲ್ಲ. ಕಾರಣ ಇದರಿಂದ ಸಂಘಕ್ಕೆ ಬೇಳೆ ಬೇಯಿಸಲು ಅನುಕೂಲವಾಗುತ್ತದೆ. ಇಂತಹ ವಿಷಯಗಳಿಗೆ ಅವರು ಕಾಯುತ್ತಿರುತ್ತಾರೆ ಎಂದು ಟೀಕಿಸಿ, ಮುಸ್ಲಿಮರನ್ನು ಧರ್ಮದ ಕಾರಣಕ್ಕಾಗಿ ದ್ವೇಷ ಮಾಡುವುದಾದರೆ ಅದು ನಿಜವಾದ ದೇಶದ್ರೋಹ ಎಂದು ಪ್ರತಿಪಾದಿಸಿದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ನಮಗೆಲ್ಲರಿಗೂ ಪಾಠವಾಗಬೇಕು. ಸತ್ತ ನಂತರವೂ ಗೌರಿ ಲಂಕೇಶ್ ಬದುಕಿದ್ದಾರೆ. ಅವರ ಸಾವಿನಲ್ಲಿ ಸಾರ್ಥಕತೆ ಇದೆ ಎಂದರು.

ನಾನು ಚಿಕ್ಕವನಾಗಿದ್ದಲೇ ಅನ್ಯಾಯವನ್ನು ಪ್ರತಿಭಟಿಸುವ ಪ್ರವೃತ್ತಿ ಇತ್ತು. ಏನಾದರೂ ಮಾಡಬೇಕು ಎಂದು ಯೋಚಿಸುವ ವೇಳೆ ಸಣ್ಣ ಪ್ರವೇಶ ಸಂಘ ಪರಿವಾರದಲ್ಲಾಯಿತು. ನನ್ನ ಬದುಕಿನ ನಡುವೆ ಇದೊಂದು ಪಯಣವಷ್ಟೇ ಎಂದು ವಿಶ್ಲೇಷಿಸಿದ ಅವರು,  ಬಿಜೆಪಿಗೆ ಒಂದು ಜನ ಸೇರದ ಸಂದರ್ಭದಲ್ಲೊ ನಾನು 150 ಜನ ಸೇರಿಸಿದ್ದೆ.  ನನಗೇನೂ ಬಿಜೆಪಿ ಇಷ್ಟ ಇರಲಿಲ್ಲ. ಆಗ ನನಗೆ  ಶಿಕ್ಷಕರೊಬ್ಬರು ಸಂಘದ ಪ್ರಾಥಮಿಕ ಶಾಖೆಗೆ ಹೋಗಿ ತರಬೇತಿ ಪಡೆಯಲು ಕಳುಹಿಸಿದರು. ಈ ಮೂಲಕ ಸಂಘ ಪರಿವಾರ ಪ್ರವೇಶಿಸಿದೆ ಎಂದರು.

ಭಜರಂಗದಳ ಸಂಘಟನೆ ಮಾಡುವ ಕೆಲಸವನ್ನು ನನಗೆ ಕೊಡಲಾಯಿತು. ಅದೇನೂ ಸುಲಭವಲ್ಲ, 150 ಜನರನ್ನು ಮಾತನಾಡಿ 10 ಜನ ಸೇರುತ್ತಿದ್ದೆವು. ಅನಂತರ 100 ಜನರನ್ನು ಸೇರಿಸಿ ಘಟಕವೊಂದನ್ನು ಆರಂಭಿಸಿದೆವು. ನಂತರದ ಮೂರು ವರ್ಷಗಳಲ್ಲಿ  ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮನೆ ಮನೆಯಲ್ಲಿ ಭಜರಂಗದಳ ಮಾಡಿದ್ದೆ ಎಂದು ನೆನಪಿಸಿಕೊಂಡರು.

ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಡೆದ ಬೈಟಕ್ ವೇಳೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಹಾಗೂ ಪ್ರಮುಖರು ಭಾಗವಹಿಸಿದ್ದರು. ಆಗ ದತ್ತಪೀಠ ಹೋರಾಟವನ್ನು ಶಾಂತಿಯಿಂದ ಮಾಡುವಂತೆ ಸೂಚಿಸಲಾಯಿತು. ಅದನ್ನು ನಾನು ಪ್ರಶ್ನಿಸಿದ್ದೆ. ನಾವು ನಿಮ್ಮ ಗುಲಾಮರಲ್ಲ. ಬೇರೆ ವೇಳೆ ಶಾಂತಿ ಭಂಗ ಮಾಡಿ ಎನ್ನುವುದು, ಈಗ ಶಾಂತಿಯುತ ಪ್ರತಿಭಟನೆ ಮಾಡಿ ಎನ್ನುವುದು ದ್ವಂದ್ವವಲ್ಲವೇ ಎಂದು ಪ್ರಶ್ನಿಸಿದೆ. ಆಗಿಂದಲೇ ನನ್ನನ್ನು ದತ್ತಪೀಠ ಹೋರಾಟದಿಂದ ದೂರ ಇಡುವ ಪ್ರಯತ್ನ ಆರಂಭವಾಯಿತು ಎಂದರು.

ಮತ್ತೊಂದು ಘಟನೆ ನೆನಪಿಸಿಕೊಂಡ ಅವರು, ದಲಿತರಿಗೆ ದತ್ತ ಮಾಲೆ ಹಾಕಲು ದೇವಸ್ಥಾನಕ್ಕೆಕರೆದುಕೊಂಡು ಹೋಗಿದ್ದೆ. ಅಲ್ಲಿ ದಲಿತರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡುವುದಿಲ್ಲ. ದಲಿತರು ಅಲ್ಲಿಗೆ ಬರಲು ಒಪ್ಪಲಿಲ್ಲ. ಬಲವಂತ ಮಾಡಿ ಕರೆದುಕೊಂಡು ಹೋಗಿದ್ದೆ. ಆಗ ಹಳ್ಳಿಯ ಜನರು ದಂಡ ಕಟ್ಟಿಸಿಕೊಂಡಿದ್ದರು. ಇದನ್ನು ಸಂಘದ ವೇದಿಕೆಯಲ್ಲಿ ಪ್ರಶ್ನಿಸಿದ್ದಕ್ಕೆ, ಅದು ನಿಧಾನಕ್ಕೆ ಬದಲಾಗುತ್ತದೆ ಎಂದಿದ್ದರು. ಬದಲಾಗಲೇ ಇಲ್ಲ ಎಂದರು.

ಮತ್ತೊಂದು ದತ್ತುಮಾಲೆ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಸಭೆ ಮಾಡಲು ಬ್ರಾಹ್ಮಣರು ಅವಕಾಶ ನೀಡಲಿಲ್ಲ. ದೂರದಲ್ಲಿ ಮರದ ಕೆಳಗೆ ಸಭೆ ಮಾಡಿ ಎಂದರು. ನನಗೆ 10 ಸಭೆಗಳು ನಡೆಯುವವರೆಗೂ ಗೊತ್ತಾಗಲಿಲ್ಲ. ನಮ್ಮ ಜತೆ ದಲಿತರು ಇದ್ದರು. ಅವರನ್ನು ದೂರ ಇಡಲು ಈ ಸೂಚನೆ ಬಂದಿತ್ತು. ದಲಿತರೂ ನಮ್ಮಜತೆಗೆ ಹೋರಾಟ ಮಾಡುತ್ತಾರೆ. ಅವರನ್ನು ಯಾಕೆ ದೂರವಿಡಬೇಕು. ಹಿಂದೂ ನಾವೆಲ್ಲಾ ಒಂದು ಅಂತಾರೆ. ಆದರೆ ಮನಸಿನೊಳಗೆ ಮಾತ್ರ ದಲಿತರನ್ನು ಹತ್ತಿರ ಬಿಟ್ಟುಕೊಳ್ಳುವ ವಿಚಾರವೇ ಅವರಲ್ಲಿ ಇಲ್ಲ ಎಂದರು.

 

ವಕೀಲ ಸುಧೀರ್ ಮರೊಳ್ಳಿ ಅವರು ಮಾತನಾಡಿ, ಕುವೆಂಪು ಜಯಂತಿ, ನಾರಾಯಣ ಗುರು, ವಿವೇಕಾನಂದ ಎಲ್ಲರ ಜಯಂತಿಯನ್ನೂ ನಾವು ಮಾಡಬೇಕು. ಇಲ್ಲದಿದ್ದರೆ ಎಲ್ಲರನ್ನೂ ಸಂಘ ಪರಿವಾರ ಹೈಜಾಕ್ ಮಾಡುತ್ತಾರೆ ಎಂದರು.

ನೆಹರು ಹೈಜಾಕ್ ಮಾಡಲು ಆಗಲಿಲ್ಲ ಎಂದರೆ ಅವರು ಪ್ರತಿಮೆ ಒಂದು ಮಾಡಿ ಮುಗಿಸಿ ಬಿಡ್ತಾರೆ. ಗಾಂಧಿಯನ್ನೂ ಹೈಜಾಕ್ ಮಾಡಿ ಗಾಂಧಿ ಗೋಹತ್ಯೆ ವಿರೋಧಿ ಅಂತಾರೆ. ಈಗಾಗಲೇ ನಿವೃತ್ತ ನ್ಯಾಯಾಧೀಶರ, ವಕೀಲರ ಸಮಾವೇಶಗಳನ್ನು ಉದ್ಘಾಟಿಸಿದ್ದಾರೆ. ಹಿಂದೂ ಪ್ರೇಮಿ ಪೊಲೀಸರ, ನ್ಯಾಯಾಧೀಶರ ಸಂಘ ಕಟ್ಟುತ್ತಾರೆ ಎಂದು ಎಚ್ಚರಿಸಿದರು.

ಸಂಘ ಪರಿವಾರದ ದಿನಗಳನ್ನು ನೆನಪಿಸಿಕೊಂಡ ಅವರು, ಇವರ ಬಳಿ ಇದ್ದುದೆಲ್ಲವು ಧ್ವಂಸದ ಯೋಚನೆಗಳೇ. ಭ್ರಷ್ಟಾಚಾರದ ಬಗ್ಗೆ ಎಷ್ಟು ಸರಳವಾಗಿ ಹೇಳುತ್ತಾರೆ ಎಂದರೆ, ನಮ್ಮವರು ತಿನ್ನಲಿ ಬಿಡಿ ಎನ್ನುತ್ತಿದ್ದರು. ಇನ್ನೂ ಮುಂದುವರಿದು ಕೇವಲ ಜಾಫರ್ ಶರೀಫ್, ಅಬ್ಬಾಸ್ ಮಾತ್ರ ತಿನ್ನಬೇಕಾ ಎನ್ನುತ್ತಿದ್ದರು ಎಂದರು

ಸುದೀರ್ ನಕ್ಸಲ್ರೊಂ ದಿಗೆ ಸಂಬಂಧ ಹೊಂದಿದ್ದಾರೆ ಎಂದು ಈಗ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಗೌರಿ ಲಂಕೇಶ್ ಪರ ವಕಾಲತ್ ವಹಿಸಿದ್ದೆ. ಅದರ ಸರ್ಟಿಫಿಕೇಟ್‍ ತಂದು ತೋರಿಸಿ ನಾನೇ ನಕ್ಸಲ್‍ ಎನ್ನುತ್ತಿದ್ದಾರೆ. ಇಂತಹ ಅಪಪ್ರಚಾರಕ್ಕೆ ಮಣಿಯುವುದಿಲ್ಲ ಎಂದರು.

ಕಮ್ಯುನಿಷ್ಟರನ್ನು, ಪ್ರಗತಿಪರರನ್ನು ದ್ವೇಷ ಮಾಡುವುದು ಅವರ ಕೆಲಸ. ಆದರೆ ಕಾಂಗ್ರೆಸ್‍ ಅವರಿಗೆ ಬೇಕಾಗಿದೆ. ಹಾಗಾಗಿ ಅದರ ತಂಟೆಗೆ ಹೋಗಲ್ಲ ಎಂದರು.

ಇಂತಹ ವಿಚಾರಧಾರೆಯಡಿ ಸ್ವರ್ಗವೊಂದು ಇದ್ದರೆ, ಅದು ಸಿಕ್ಕರೂ ನಿರಾಕರಿಸುತ್ತೇನೆ ಎಂದರು.

ಕೆಲ ದಿನಗಳ ಹಿಂದೆ ನನ್ನ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಇಡೀ ಮನೆ ಹುಡುಕಿದರು. ಏನೂ ಸಿಗಲಿಲ್ಲ. ಕೊನೆಗೆ ಪುಸ್ತಕದ ಕೊನೆಯ ಪುಟ ತೆಗೆದು, ಇವರು ಹೇಗೆ ಪರಿಚಯ ಎಂದು ಕೇಳುತ್ತಿದ್ದರು. ಆಗ ಒಬ್ಬ ಐಟಿ ಅಧಿಕಾರಿ ನೀನು ಯಾಕೆ ಆರೆಸ್ಸೆಸ್ ಮತ್ತು ಎಬಿವಿಪಿ ಯಾಕೆ ಬಿಟ್ಟುಎಂದೂ ಕೇಳಿದ್ದರು. ಇದರಿಂದಲೇ ಗೊತ್ತಾಗುತ್ತದೆ ಅವರು ಏನು ಎಂಬುದು ಎಂದರು.

ಸಂಘ ಪರಿವಾರದವರಲ್ಲಿರುವುದು ಖಾಲಿ ಬುರುಡೆ. ವಿಚಾರಗಳು ಏನೂ ಇಲ್ಲ. ಬೀದಿಯ ಜಗಳ, ಕುಸ್ತಿಯಿಂದ ಇವರನ್ನು ಎದುರಿಸಲು ಆಗೋಲ್ಲ. ಸುಲಭವಾಗಿ ಬಿತ್ತಬಹುದಾದ ಸಿದ್ಧಾಂತವಿದು. ಅದನ್ನು ಮತ್ತೊಂದು ಸಿದ್ಧಾಂತದಿಂದ ಮಾತ್ರ ಎದುರಿಸಲು ಸಾಧ್ಯ ಎಂದರು.

ಆರ್.ಎಸ್.ಎಸ್. ಸೇರಿದ ಪಯಣದ ಬಗ್ಗೆ ಮಾತನಾಡಿ, 6ನೇ ತರಗತಿಯಿಲ್ಲದ್ದಾಗ ಶಾಲಾ ವಾರ್ಷಿಕೋತ್ಸವ ಮಾಡಲು ಸ್ವಚ್ಛತಾ ಕೆಲಸ ಮಾಡುತ್ತಿದ್ದೆವು. ಆಗ ಪಾರ್ಥೇನಿಯಂ ಗಿಡಗಳನ್ನು ಕೀಳುವ ವೇಳೆ ಕಾಂಗ್ರೆಸ್‍ ಗಿಡಿ ಕಿತ್ತಾಕಿದ್ದೀರ ಅಲ್ವಾ ಎಂದು ಟಿಚರ್ ಹೇಳಿದರು. ಆಗ ಶಿಕ್ಷಕರ ನಡುವೆ ಚರ್ಚೆ ನಡೆದಿತ್ತು. ನೀವು ಕಾಂಗ್ರೆಸ್‍ ಗಿಡ ಅಂತೀರಾ, ನಾವು ಜನತಾ ಗಿಡ ಮತ್ತು ಕಮ್ಯುನಿಸಟ್‍ ಗಿಡ ಎಂದಿದ್ದರು. ಏನೂ ಮಾತನಾಡದ ಶಿಕ್ಷಕ ಸಂಜೆ ನಂತರ ಆಟ ಆಡಲು ಬನ್ನಿ ಎಂದು ಕರೆದುಕೊಂಡು ಹೋದರು. ಅಲ್ಲಿ ನೇತಾಡಿಸಿದ್ದ ಕೇಸರಿಧ್ವಜವನ್ನುಇದು ಭಗವಾನ್ ಧ್ವಜ ಎಂದು ಪರಿಚಯ ಮಾಡಿಕೊಟ್ಟರು. ಸ್ವಾತಂತ್ರ್ಯ ದಿನದಂದು ಏನೇ ಬರಲಿ, ಒಗ್ಗಟ್ಟಿರಲಿ ಎಂದು ಘೋಷಣೆ ಕೂಗುತ್ತಿದ್ದೆವು. ಆದರೆ, ಆ ಶಿಕ್ಷಕ ಹಿಂದೂ  ನಾವೆಲ್ಲ ಒಂದು ಎಂದು ಹೇಳಿಕೊಡುತ್ತಿದ್ದರು ಎಂದರು.

9ನೇ ತರಗತಿಯಲ್ಲಿ ನೆಹರೂ ಅವರ 100ನೇ ವರ್ಷದ ಹುಟ್ಟಿದ ದಿನಾಚರಣೆ ಕಾರ್ಯಕ್ರಮ ಸಿಂಡಿಕೇಟ್ ಬ್ಯಾಂಕ್ ನೇತೃತ್ವದಲ್ಲಿ ನಡೆದಿತ್ತು. ಆಗ ನಡೆದ ಭಾಷಣ ಸ್ಪರ್ಧೆಯಲ್ಲಿ ನವ ಭಾರತ ನಿರ್ಮಾಣದಲ್ಲಿ ನೆಹರು ಪಾತ್ರ ಎಂಬ ವಿಷಯವಾಗಿ ಮಾತನಾಡಿದ ನನಗೆ ಮೊದಲ ಬಹುಮಾನ ಸಿಕ್ಕಿತು. ಅನಂತರ ಶಿಕ್ಷಕರ ಹತ್ತಿರ ಹೋದೆ. ಅವರ ಬಗ್ಗೆ ಮಾತನಾಡಲು ಹೋಗು ಅಂತ ಕೇಳಿದ್ದರು. ಈ ದೇಶ ಹಾಳಾಗಲು ನೆಹರೂ ಕಾರಣ, ಭಾರತ, ಪಾಕಿಸ್ತಾನ ಎರಡು ಆಗಲು ನೆಹರು ಸರಕಾರ ಕಾರಣವಾಗಿತ್ತು ಎಂದಿದ್ದರು.

ನಿಕೇತ್‍ ರಾಜ್ ಮೌರ್ಯ ಅವರು ಮಾತನಾಡಿ, ಸಂಘ ಪರಿವಾರದವರು ತುಂಬಾ ಚೆನ್ನಾಗಿ ಮಾತನಾಡುತ್ತಿದ್ದರು. ಆದರೆ ಮಾಡುವುದು ಮಾತ್ರ ಬೆಂಕಿ ಹಚ್ಚುವ ಕೆಲಸ ಎಂದರು.

ಇತಿಹಾಸದ ಗಾಳಿ ಗಂಧ ಗೊತ್ತಿಲ್ಲದ ಸಂದರ್ಭದಲ್ಲಿ ಆರೆಸ್ಸೆಸ್ ನವರು ಹೇಳುತ್ತಿದ್ದ ಕಥೆಗಳೇ ಇತಿಹಾಸ. ಈಗಂತೂ ವಾಟ್ಸಾಪ್, ಪೇಸ್ ಬುಕ್ ವಿವಿಗಳೇ ಸೃಷ್ಟಿಯಾಗಿವೆ ಎಂದರು.

ನಮಗೆ ಅಂದು ನಡೆಯುವ ಧಾರ್ಮಿಕ ಸಭೆಗಳಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದ ಸೇರಿದಂತೆ ಮತ್ತಿತರೆ ವಿಷಯಗಳ ಬಗ್ಗೆ ಮಾತನಾಡಿ ಎನ್ನುತ್ತಿರಲಿಲ್ಲ. ಮೊನ್ನೆ ಅಲ್ಲಿ ಕತ್ತು ಕುಯ್ದ ವಿಷಯದ ಬಗ್ಗೆ ಮಾತನಾಡು ಎನ್ನುತ್ತಿದ್ದರು ಎಂದು ನೆನಪಿಸಿಕೊಂಡರು.

ಚುನಾವಣೆ ವೇಳೆ ನರೇಂದ್ರ ಮೋದಿ ಪರವಾಗಿ ಹಳ್ಳಿ ಹಳ್ಳಿಗಳಲ್ಲಿ ಭಾಷಣ ಮಾಡಿದ್ದೆ. ನಾವು ನೈಜವಾಗಿ ಗುಜರಾತ್ ನೋಡಿಲ್ಲ. ಆದರೂ, ಅದರ ಬಗ್ಗೆ ಗಂಟೆಗಟ್ಟಲೇ ಭಾಷಣ ಮಾಡುತ್ತಿದ್ದೆವು. ಇವರು ಮಾಡುತ್ತಿದ್ದ ಭಾಷಣ ಕೇಳುತ್ತಿದ್ದೆವು. ಎಡಿಟ್ ಪೋಟೋ, ವಿಡಿಯೋಗಳನ್ನೇ ಸತ್ಯಅಂತ ನಂಬಿಸುತ್ತಿದ್ದರು. ಸತ್ಯಏನೆಂದು ತಿಳಿಸುತ್ತಿರಲಿಲ್ಲ. ಚುನಾವಣಾ ಸಂದರ್ಭದಲ್ಲಿ ಸುಳ್ಳನ್ನೇ ಸತ್ಯವನ್ನಾಗಿಸಿದ್ದು. ಅದನ್ನೇ ನಾವು ನಂಬಿದ್ದೆವು. ಈಗ ನಿಜ ಸ್ಥಿತಿಯ ಅರಿವು ಆಗಿದೆ. ಹಾಗಾಗಿ ಬಿಟ್ಟು ಬಂದೆ ಎಂದರು.

ಮುತ್ತಾತನ ಕಾಲದಲ್ಲಿ ನಡೆದಿರುವ ಘಟನೆಗೆ ಇಂದು ಯಾರನ್ನೋ ಹಿಡಿದು ಹೊಡೆಯುವ, ಬೈಯುವ, ನಿಂದಿಸುವ ಮಟ್ಟಕ್ಕೆ ಮೈಂಡ್ ವಾಶ್ ಮಾಡುತ್ತಾರೆ ಎಂದು ಕಿಡಿ ಕಾರಿದರು.

ವಿವೇಕಾನಂದ ಎಂದರೆ ಕಟ್ಟರ್ ಹಿಂದೂವಾದಿ ಎಂದು ಹೇಳಿಕೊಟ್ಟಿದ್ದರು. ಮುಸ್ಲಿಂ, ಕ್ರಿಶ್ಚಿಯನ್ ವಿರೋಧಿ ಎಂದೇ ನಾವು ತಿಳಿದಿದ್ದೆವು. ವಿವೇಕಾನಂದರ ಜೀವನ ಚರಿತ್ರೆಯನ್ನು ಓದಿದರೆ ನಿಜವಾದ ಇತಿಹಾಸ ಸಿಗುತ್ತದೆ ಎಂದರು.

ಬೌದ್ಧಧರ್ಮ ಸುಳ್ಳಾಗಿದ್ದರೆ, ಇಸ್ಲಾಂಧರ್ಮ ಸುಳ್ಳಾಗಿದ್ದರೆ ಸಾವಿರಾರು ವರ್ಷಗಳು ಉಳಿಯಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ ಅವರು,  ಪುಲೆ, ಗಾಂಧಿ, ರಾಮಕೃಷ್ಣ, ವಿವೇಕಾನಂದ ಸೇರಿದಂತೆಅ ನೇಕರನ್ನು ಹೈಜಾಕ್ ಮಾಡುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ವಿವೇಕಾನಂದರನ್ನು ಹೈಜಾಕ್ ಮಾಡಲಾಗಿದೆ. ಆದರೆ ವಿವೇಕಾನಂದ ಅವರು ತಮ್ಮನ್ನು ಸಮಾಜವಾದಿ ಎಂದಿದ್ದರು. ಪೈಗಂಬರ್ ಬಗ್ಗೆ, ಜೀಸಸ್ ಬಗ್ಗೆಯೂ ವಿವೇಕಾನಂದ ಮಾತನಾಡಿದ್ದಾರೆ. ವಿವೇಕಾನಂದರ ಮೇಲೆ ಗೌರವ ಬರಬೇಕಾದರೆಅಪಾರವಾಗಿಓದಬೇಕು. ಜಯಂತಿಗಳನ್ನು ಎಲ್ಲಕಡೆ ಆಚರಣೆ ಮಾಡಬೇಕು ಎಂದರು.

ಇದೇ ಬಿಜೆಪಿಯವರು ಟಿಪ್ಪು ಹೊಗಳುತ್ತಿದ್ದರು. ರಾಕೆಟ್ ತಂತ್ರಜ್ಞನ ಕೊಂಡಾಡುತ್ತಿದ್ದರು. ಹೈದರಾಲಿ ದೇಭಕ್ತನಾಗಿದ್ದ ಎನ್ನುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಣೆ ಮಾಡಿದ ಮೇಲೆ ಟಿಪ್ಪು ಹಿಂದೂ ವಿರೋಧಿ ಆದ. ಹೇಗೆ ಎಂದು ಪ್ರಶ್ನಿಸಿದರು.

ಟಿಪ್ಪುಜಯಂತಿಯನ್ನುಯಡಿಯೂರಪ್ಪ ಮಾಡಿದಾಗ, ಜಗದೀಶ್ ಶೆಟ್ಟರ್ ಸರ್ಕಾರ ಪುಸ್ತಕ ಪ್ರಕಟಿಸಿದಾಗ ಇವರೆಲ್ಲಾ ಏನಾಗಿದ್ದರು ಎಂದರು.

ನಾಲ್ಕು ವರ್ಷದಿಂದ ಸುಮ್ಮನಿದ್ದವರು ಈಗ ರಾಮಮಂದಿರವನ್ನು ಕಟ್ಟುತ್ತೇವೆ ಎನ್ನುತ್ತಿದ್ದಾರೆ ಎಂದ ಅವರು, ಗಾಂಧಿಗಿದ್ದುದೇ  ಸತ್ಯವಾದ ರಾಮಭಕ್ತಿ. ರಾಜಕೀಯ ರಾಮಭಕ್ತಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು.

ಈಗ ರಾಮನ್ನು ಬಿಟ್ಟು, ಆಂಜನೇಯ ದಲಿತ ಎಂದು ಹೇಳಲು ಆರಂಭಿಸಿದ್ದಾರೆ. ಇದೆಲ್ಲವೂ ಕೇವಲ ಮತಕ್ಕಾಗಿ ಈ ಷಡ್ಯಂತರ. ಆಂಜನೇಯನಿಗೆ ಜಾತಿ ಕಟ್ಟಬೇಕಾ ಎಂದು ಕೇಳಿದರು.

ಒಂದೆರಡು ಕುಟುಂಬ ಮತಾಂತರವಾದರೆ ಐದು ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ಮಾಡುತ್ತಾರೆ. ಅವರು ಒಂದು ಧರ್ಮದಲ್ಲಿನ ಶೋಷಣೆಯಿಂದ ಬೇಸತ್ತು ಮತಾಂತರವಾಗ್ತಾರೆ ಎಂದು ಹೇಳಿದರೆ ನೀವು ಅದನ್ನೆಲ್ಲಾ ಮಾತನಾಡಬಾರದು ಎಂದು ಹೇಳ್ತಾರೆ. ಇದೇ ರೀತಿಯ ದ್ವಂದ್ವಗಳೇ ಅವರಲ್ಲಿವೆ ಎಂದರು.

ನಾನಿಂದು ಇಂತಹ ವಿಚಾರಧಾರೆಯಿಂದ ಹೊರಗಡೆ ಬರಲು ಕುವೆಂಪು ಸಾಹಿತ್ಯವನ್ನು ಓದಿಕೊಂಡೆ ಎಂದರು. ಸತ್ಯವಾದ ಸಿದ್ಧಾಂತವನ್ನು ಹರಡಬೇಕು. ಒಂದಲ್ಲ ಒಂದು ದಿನ ಸತ್ಯವೇ ಗೆಲ್ಲುತ್ತದೆ. ಸುಳ್ಳಿನಿಂದ ಸಾಮ್ರಾಜ್ಯ ಕಟ್ಟಬಹುದು. ಆದರೆ, ಹೆಚ್ಚು ದಿನ ಇರುವುದಿಲ್ಲ ಎಂದರು.

1 Comment

  1. ಧನ್ಯವಾದಗಳು. ತಾವು ವಿವರಿಸಿದ ಪ್ರತಿಯೊಂದು ವಿಷಯ ನನ್ನಂತೆ ಅದೆಷ್ಟೋ ಭಾರತೀಯರ ಅಂತರಾಳದ ವಿಷಯ.ಸಂಗಟನೆ ಕೇವಲ ರಾಜಕೀಯ ಅಷ್ಟೇ.

Leave a Reply

Your email address will not be published.


*