ಬಿಜೆಪಿಯ ರಾಜಕೀಯ ಲಾಭಕ್ಕಾಗಿ ಧರ್ಮಗಳ ಮಧ್ಯೆ ವೈಷಮ್ಯ: ಸಚಿವೆ ಡಾ. ಜಯಮಾಲಾ

ಬೈಂದೂರು, ಅ.21: ಬಿಜೆಪಿ ಧರ್ಮ ಧರ್ಮಗಳ ಮಧ್ಯೆ ವೈಷಮ್ಯ ಮೂಡಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸುತ್ತಿದೆ. ಜನತೆ ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಬೈಂದೂರು ರೋಟರಿ ಭವನದಲ್ಲಿ ರವಿವಾರ ಆಯೋಜಿಸಲಾದ ಬೈಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡು ತಿದ್ದರು.

ಧರ್ಮದ ಹೆಸರಿನಲ್ಲಿ ಸಮುದಾಯಗಳ ನಡುವೆ ಪ್ರತ್ಯೇಕತೆ ಸೃಷ್ಟಿಸಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಪಾಠ ಕಲಿಸಬೇಕಾಗಿದೆ. ಪ್ರೀತಿ ಮತ್ತು ವಿಶ್ವಾಸಕ್ಕಿಂತ ದೊಡ್ಡ ಧರ್ಮವಿಲ್ಲ. ಸುಳ್ಳನ್ನು ನೂರಾರು ಬಾರಿ ಹೇಳುವ ಮೂಲಕ ಅದನ್ನು ಸತ್ಯವೆಂಬ ಭ್ರಮೆ ಹುಟ್ಟಿಸಲು ಬಿಜೆಪಿ ಹೊರಟಿದೆ. ಇವರ ವಿರುದ್ಧ ಎರಡೂ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಹೋರಾಟ ನಡೆಸಬೇಕೆಂದು ಅವರು ತಿಳಿಸಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಮ್ಮರವಾಗಿ ಬೆಳೆದಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. ನೂರಾರು ಭರವಸೆಗಳನ್ನು ನೀಡಿ ಅಧಿಕಾರ ಹಿಡಿದ ಕೇಂದ್ರದ ಬಿಜೆಪಿ ಸರಕಾರ ಈ ಬಗ್ಗೆ ಮಾತನಾಡುತಿಲ್ಲ ಎಂದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಜನಪರ ಆಡಳಿತದ ಮೂಲಕ ಜನರ ಪ್ರೀತಿ ಗಳಿಸಿದೆ. ರೈತರ ಸಾಲಮನ್ನಾ ಸೇರಿದಂತೆ ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಪೂರಕವಾದ ಯೋಜನೆ ರೂಪಿಸಿದೆ ಎಂದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪಮಾತನಾಡಿ ಜನ ನಾಯಕರು ಜನಪರ ಕಾರ್ಯಗಳಿಂದ ಗುರುತಿಸಿಕೊಳ್ಳಬೇಕು. ಬಂಗಾರಪ್ಪ ನವರ ಜನಪರ ಕಾರ್ಯಗಳು ಬಡವರ ಬದುಕನ್ನು ಬದಲಿಸಿದೆ. ಅವರ ಆದರ್ಶ ಮೈಗೂಡಿಸಿಕೊಂಡು ಕಾರ್ಯ ನಿರ್ವಹಿಸುವ ಅವಕಾಶವನ್ನು ಕ್ಷೇತ್ರದ ಮತ ದಾರರು ನೀಡಬೇಕು ಎಂದು ಹೇಳಿದರು.

ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಬಿಜೆಪಿ ಅಪಪ್ರಚಾರದ ಮೂಲಕ ಜನರನ್ನು ಮರಳು ಮಾಡುತ್ತಿದೆ. ಜಾತಿಗಳ ನಡುವೆ ವಿಷಬೀಜ ಬಿತ್ತುವ ಪ್ರಯತ್ನಕ್ಕೆ ಮತದಾರರು ಬೆಲೆ ನೀಡಬಾರದು. ಈ ಮೂಲಕ ಬಿಜೆಪಿಯವರ ದುರಾಡಳಿತಕ್ಕೆ ಅಂತ್ಯ ಹಾಡಬೇಕು. ಪರೇಶ್ ಮೇಸ್ತರ ಹೆಸರಿನಲ್ಲಿ ಮತ ಪಡೆದು ಜಯಗಳಿಸಿದ ಬಿಜೆಪಿ ಮುಖಂಡರಿಗೆ ಈವರೆಗೆ ಆ ಪ್ರಕರಣದ ತನಿಖೆ ನಡೆಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್, ಕಾಪು ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾದರ್ನ ತೋನ್ಸೆ, ಭಟ್ಕಳದ ಮಾಜಿ ಶಾಸಕ ಮಂಕಾಳ ಎಸ್.ವೈದ್ಯ, ಮಾಜಿ ಶಾಸಕ ಆನಂದ ಆಸ್ನೋಟಿಕರ್, ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಪೂರ್, ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಕೆಪಿಸಿಸಿ ಕಾರ್ಯದರ್ಶಿ ಬೆಳಪು ದೇವಿಪ್ರಸಾದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*