ತವರಿಗೆ ಆಗಮಿಸಿದ ಮೃತದೇಹ: ಶಿರ್ವದಲ್ಲಿ ಅಂತ್ಯಸಂಸ್ಕಾರ

ಶಿರ್ವ, ಸೆ.28: ಸೌದಿ ಅರೇಬಿಯಾದಲ್ಲಿ ಸಾವನ್ನಪಿದ ಅಲ್‌ಮಿಕ್ವ ಆಸ್ಪತ್ರೆಯ ನರ್ಸ್, ಶಿರ್ವ ಸಮೀಪದ ಕುತ್ಯಾರು ಮೂಲದ ಅಗರ್‌ದಂಡೆ ನಿವಾಸಿ ಹೆಝೆಲ್ ಜೋತ್ಸ್ನಾ ಮಥಾಯಸ್ (28) ಮೃತದೇಹವು 72 ದಿನಗಳ ಬಳಿಕ ಗುರುವಾರ ತವರೂರಿಗೆ ತಲುಪಿದ್ದು, ಮೃತದೇಹದ ಅಂತ್ಯಸಂಸ್ಕಾರವನ್ನು ಇಂದು ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ನೆರವೇರಿಸಲಾಯಿತು.

ಕಳೆದ ಆರು ವರ್ಷಗಳಿಂದ ಸೌದಿ ಅರೆಬಿಯಾದಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುತ್ಯಾರಿನ ಅಶ್ವಿನ್ ಮೆಥಾಯಸ್‌ರ ಪತ್ನಿ ಹೆಝೆಲ್ ಜೋತ್ಸ್ನಾ ಮಥಾಯಸ್ ಜು. 21ರಂದು ಸೌದಿ ಅರೇಬಿಯಾದ ಮಹಿಳೆಯರ ಹಾಸ್ಟೆಲ್ ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಆಸ್ಪತ್ರೆಯ ಆಯಂಬುಲೆನ್ಸ್ ಚಾಲಕನ ಕಿರುಕುಳದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತ ಡೆತ್‌ನೋಟ್ ಪತ್ತೆಯಾಗಿತ್ತು.

ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೆಝೆಲ್ ಮೃತದೇಹವನ್ನು ಸೌದಿ ಅರೇಬಿಯಾ ಸರಕಾರವು ಸೆ.27ರಂದು ಭಾರತಕ್ಕೆ ಕಳುಹಿಸಿಕೊಟ್ಟಿತು. ಗುರುವಾರ ಸಂಜೆ ಊರಿಗೆ ಆಗಮಿಸಿದ ಪಾರ್ಥಿವ ಶರೀರವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಪಾರ್ಥಿವ ಶರೀರ ವನ್ನು ಕುತ್ಯಾರಿನ ನಿವಾಸಕ್ಕೆ ತಂದು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಬಳಿಕ ಸಂಜೆ ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಅತೀ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಉಪಸ್ಥಿತಿಯಲ್ಲಿ ಚರ್ಚ್‌ನ ಹಿರಿಯ ಧರ್ಮ ಗುರುಗಳಾದ ರೆ.ಫಾ.ಡೆನಿಸ್ ಎ.ಡೇಸಾ ನೇತೃತ್ವದಲ್ಲಿ ಸಾರ್ವಜನಿಕ ಬಲಿಪೂಜೆ ಸೇರಿದಂತೆ ವಿವಿಧ ಪ್ರಾರ್ಥನಾ ವಿಧಿಗಳೊಂದಿಗೆ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ಇದರಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಜಿಪಂ ಸದಸ್ಯರಾದ ಶಿಲ್ಪಾಜಿ.ಸುವರ್ಣ, ವಿಲ್ಸನ್ ರೊಡ್ರಿಗಸ್, ಗೀತಾಂಜಲಿ ಸುವರ್ಣ, ತಾಪಂ ಸದಸ್ಯರಾದ ಮೈಕಲ್ ರಮೇಶ್ ಡಿಸೋಜ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಸಮಾಜ ಸೇವಕ ಕುತ್ಯಾರು ಪ್ರಸಾದ್ ಶೆಟ್ಟಿ, ಶಿಕ್ಷಕ ಕುದಿ ವಸಂತ ಶೆಟ್ಟಿ, ಮೆಲ್ವಿನ್ ಡಿಸೋಜ, ಕುತ್ಯಾರು ಗ್ರಾಪಂ ಅಧ್ಯಕ್ಷ ಧೀರಜ್ ಶೆಟ್ಟಿ ಶ್ರದ್ಧಾಂಜಲಿ ಅರ್ಪಿಸಿದರು.

ಗಲ್ಫ್ ರಾಷ್ಟ್ರಗಳಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತಿದ್ದರೂ ನಮ್ಮ ವಿದೇಶಾಂಗ ಸಚಿವಾಲಯ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪಾರ್ಥಿವ ಶರೀರ ಊರಿಗೆ ಬರಲು 72 ದಿನಗಳು ಬೇಕಾಯಿತು. ಈ ಘಟನೆಯ ನಂತರ ರಾಜ್ಯದ 28 ಸಂಸದರಿಗೆ ಪತ್ರ ಬರೆದು ಸದನದಲ್ಲಿ ಧ್ವನಿ ಎತ್ತುವಂತೆ ಮನವಿ ಮಾಡಿದ್ದೆ. ಆದರೆ ಯಾರು ಕೂಡ ಇದಕ್ಕೆ ಸ್ಪಂದಿಸಿಲ್ಲ. ರಾಜ್ಯ ಸರಕಾರ ಮೃತ ಕುಟುಂಬಕ್ಕೆ 1 ಲಕ್ಷ ಪರಿಹಾರವನ್ನು ನೀಡಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸರಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.

– ಐವ್ ಡಿಸೋಜ, ವಿಧಾನ ಪರಿಷತ್ ಸದಸ್ಯ

Be the first to comment

Leave a Reply

Your email address will not be published.


*