ಕುಂಟ್ರಕಳದಲ್ಲಿ ವೆಲಂಕಣಿ ಮಾತೆಯ ಗ್ರೋಟ್ಟೊ ಧ್ವಂಸ: ಕೆಡವಿದ ಜಾಗದಲ್ಲಿ ಕೊರಗಜ್ಜನ ಕಟ್ಟೆ ನಿರ್ಮಿಸಿ ಕೇಸರಿ ಧ್ವಜ ಹಾರಾಟ

ಬಂಟ್ವಾಳ, ಸೆ. 28: ವೆಲಂಕಣಿ ಮಾತೆಯ ಗ್ರೋಟ್ಟೊವನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಳಾಲು ಕುಂಟ್ರಕಳ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯಡ್ಕ ಚರ್ಚ್ ವ್ಯಾಪ್ತಿಗೆ ಬರುವ ಕುಂಟ್ರಕಳದಲ್ಲಿರುವ ಗ್ರೋಟ್ಟೊವನ್ನು ನಿನ್ನೆ ರಾತ್ರಿ ಕೆಡವಿ ಆ ಜಾಗದಲ್ಲಿ ಕೊರಗಜ್ಜನ ಕಟ್ಟೆ ನಿರ್ಮಿಸಿ ಕೇಸರಿ ಧ್ವಜ ಇಡಲಾಗಿದೆ. ಅಲ್ಲದೆ ಈ ಸ್ಥಳದಲ್ಲಿ ಶುಕ್ರವಾರ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತೆನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಎರಡೂ ಸಮುದಾಯದ ಜನರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಉದ್ವಿಗ್ವ ಸ್ಥಿತಿ ನಿರ್ಮಾಣವಾಗಿತ್ತು. ಮಾಹಿತಿ ತಿಳಿದ ವಿಟ್ಲ ಪೊಲೀಸ್ ಉಪನಿರೀಕ್ಷಕ ಯಲ್ಲಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬಂದೋಬಸ್ತು ಕಲ್ಪಿಸಿದರು. ಬಳಿಕ ವಿವಾದಿತ ಸ್ಥಳವನ್ನು ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಗ್ರೋಟ್ಟೊ ಹಾನಿ ಬಗ್ಗೆ ಡೇವಿಡ್ ಡಿಸೋಜ, ಚಾರ್ಲಿ ವೇಗಸ್ ಎಂಬವರು ನೀಡಿರುವ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದೂರು: ವಿವಾದಿತ ಜಾಗದಲ್ಲಿ ಚರ್ಚ್ ನಿರ್ಮಿಸಿ, ಆ ಮುಖಾಂತರ ನಮ್ಮನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವ ಪ್ರತಿದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ, ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕ ರಿಷಿಕೇಶ್ ಸೊನಾವಣೆ, ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕರಾದ ದಿವಾಕರ ಮುಗುಳಿಯ, ಗ್ರಾಮ ಕರಣಿಕ ಅನಿಲ್, ಕಂದಾಯ ನಿರೀಕ್ಷಕರ ಕಚೇರಿಯ ಗ್ರಾಮ ಸಹಾಯಕ ಗಿರೀಶ್ ಮತ್ತಿತರರು ಸ್ಥಳಕ್ಕಾಗಮಿಸಿ ಜಾಗದ ಒಡೆತನದ ಬಗ್ಗೆ ಪರಿಶೀಲನೆ ನಡೆಸಿದರು.

1970ರಲ್ಲಿ ನಿರ್ಮಿತ ಗ್ರೋಟ್ಟೊ: ಫಾ. ಮೈಕಲ್ ಮಸ್ಕರೇನ್ಹಸ್

ಕುಂಟ್ರಕಳದಲ್ಲಿ ವಿಜಯಡ್ಕ ಚರ್ಚ್‌ನ ಒಂದು ವಾಳೆ ಇದೆ. ಇಲ್ಲಿ 1970ರಲ್ಲೇ ವೆಲಂಕಣಿ ಮಾತೆಯ ಗ್ರೋಟ್ಟೊ(ಗುಡಿ)ಯನ್ನು ನಿರ್ಮಾಣ ಮಾಡಲಾಗಿತ್ತು. ಚರ್ಚ್‌ನ ವಾಳೆ ವ್ಯಾಪ್ತಿಗೊಳಪಡುವ ಕ್ರೈಸ್ತರು ಪ್ರತೀದಿನ ಪ್ರಾರ್ಥನೆ ನಡೆಸುತ್ತಾರೆ. ಅಲ್ಲದೆ ಇಲ್ಲಿ ಹಬ್ಬ ಹರಿದಿನದಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಗುರುವಾರ ರಾತ್ರಿ ದುಷ್ಕರ್ಮಿಗಳು ಗ್ರೋಟ್ಟೊಯನ್ನು ಕೆಡವಿ ಧ್ವಂಸಗೊಳಿಸಿ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡಿದೆ. ಈ ಗ್ರೋಟ್ಟೊ ಇರುವ ಸ್ಥಳವು ಇದು ಕುಮ್ಕಿಯಾಗಿದೆ. ಅದರ ಹಕ್ಕನ್ನು ಹೊಂದಿರುವವರ ಅನುಮತಿ ಪಡೆದೇ ಇಲ್ಲಿ ಗ್ರೋಟ್ಟೊ ನಿರ್ಮಿಸಲಾಗಿತ್ತು ಎಂದು ವಿಜಯಡ್ಕ ಚರ್ಚ್‌ನ ಧರ್ಮಗುರು ಫಾ.ಮೈಕಲ್ ಮಸ್ಕರೇನ್ಹಸ್ ಮಾಹಿತಿ ನೀಡಿದ್ದಾರೆ.

ಸ್ಥಳೀಯವಾಗಿ ಭಜನಾ ಮಂದಿರ ನಿರ್ಮಾಣ ಕಾರ್ಯ ಸಾಂಗವಾಗಿ ನೆರವೇರಿದರೆ, ಕೊರಗಜ್ಜನ ಸನ್ನಿಧಿಯಲ್ಲಿ ಭಜನಾ ಸೇವೆ ನಡೆಸುವುದಾಗಿ ಹರಕೆ ಇಟ್ಟಿದ್ದೆವು. ಆದರೆ ಕೊರಗಜ್ಜನ ಕಟ್ಟೆಯ ಸಮೀಪ ಕ್ರೈಸ್ತ ಸಮುದಾಯದವರು ಗುಡಿ ನಿರ್ಮಿಸುವುದಾಗಿ ಸಾಮಗ್ರಿಗಳನ್ನು ತಂದು ಹಾಕಿದ್ದರು. ಅಲ್ಲದೆ ಮಾತುಕತೆಗೆ ಕರೆದು ವಿವಿಧ ಆಮಿಷಗಳನ್ನು ಒಡಿದ್ದರು. ಈ ಪ್ರದೇಶವು ಸುಮಾರು 40ಕ್ಕೂ ಅಧಿಕ ಮನೆಗಳನ್ನು ಹೊಂದಿರುವ ಎಸ್‌ಟಿ ಕಾಲನಿಯಾಗಿದ್ದು, ಇಲ್ಲಿ ಯಾವುದೇ ಕ್ರಿಶ್ಚಿಯನ್ ಸಮುದಾಯದ ಮನೆಗಳೂ ಇಲ್ಲ ಎಂದು ಸ್ಥಳೀಯ ಭಜನಾ ಮಂದಿರದ ಸಂಘಟನಾ ಕಾರ್ಯದರ್ಶಿ ಜಯರಾಮ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಕಾನೂನು ಕ್ರಮ

ವಿವಾದಿತ ಸ್ಥಳದ ರಚನೆಯ ಬಗ್ಗೆ ವಿರೋಧವಿದ್ದರೆ ಕಾನೂನು ಪ್ರಕಾರ ಇತ್ಯರ್ಥ ಮಾಡಬೇಕಾಗಿತ್ತು. ಅಲ್ಲದೆ, ಇದಕ್ಕೆ ಸಂಬಂಧ ಪಟ್ಟವರಿಗೆ ದೂರು ನೀಡಬೇಕಾಗಿತ್ತು. ಅದನ್ನು ಬಿಟ್ಟು, ನೇರವಾಗಿ ಇಂತಹ ಕೃತ್ಯ ಮಾಡಿರುವುದು ಸರಿಯಿಲ್ಲ. ಈ ಸಂಬಂಧ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಲಾಗುವುದು. ಸ್ಥಳ ಯಾರಿಗೆ ಸೇರಬೇಕಾಗಿರುವುದು ಎಂಬ ಬಗ್ಗೆ ತಹಶೀಲ್ದಾರ್ ನೀಡುವ ವರದಿಯನ್ನು ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಡಾ. ರವಿಕಾಂತೇ ಗೌಡ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕುಂಟ್ರಕಳದಲ್ಲಿ ಜಾಗದ ಬಗ್ಗೆ ವಿವಾದ ಉಂಟಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ವಿವಾದಿತ ಸ್ಥಳ ಸರಕಾರಿ ಜಾಗ ಎಂಬುದು ದೃಢ ಪಟ್ಟಿದೆ. ಸರಕಾರದ ಜಾಗದಲ್ಲಿ ಯಾವ ಸಮುದಾಯಕ್ಕೂ ವಿವಾದ ನಡೆಸಲು ಅವಕಾಶವಿರುವುದಿಲ್ಲ. ಮುಂದಿನ ಕ್ರಮಗಳ ಬಗ್ಗೆ ಜಿಲ್ಲಾಡಳಿತಕ್ಕೆ ಸಮಗ್ರ ವರದಿಯನ್ನು ಸಲಿಸಲಿದ್ದೇವೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕ್ರಮಕೈಗೊಳ್ಳುತ್ತಾರೆ.
-ಪುರಂರ ಹೆಗ್ಡೆ, ಬಂಟ್ವಾಳ ತಹಶೀಲ್ದಾರ್

ಗ್ರೊಟ್ಟೋಗೆ ಹಾನಿ: ಐವನ್ ಖಂಡನೆ

ಗುಂಟಲ್‌ಕಟ್ಟೆ ವಿಜಯಡ್ಕ ಚರ್ಚ್‌ನ ವೆಲಂಕಣಿ ಮಾತೆಯ ಗ್ರೋಟ್ಟೊವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಕೃತ್ಯವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಖಂಡಿಸಿದ್ದಾರೆ.

ಕೃತ್ಯದ ಹಿಂದಿನ ದುರುದ್ದೇಶದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಧ್ವಂಸಗೊಳಿಸಿದ ಗ್ರೋಟ್ಟೊವನ್ನು ಪುನರ್ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಐವನ್ ಡಿಸೋಜ ಮನವಿ ಮಾಡಿದ್ದಾರೆ.

Be the first to comment

Leave a Reply

Your email address will not be published.


*