ಮಾನವ ಧರ್ಮ ವಿಶ್ವವ್ಯಾಪಿ: ನ್ಯಾಯವಾದಿ ಉದಯಾನಂದ

ಮಂಗಳೂರು, ಸೆ.28: ಜಗತ್ತಿನ ಎಲ್ಲ ಧರ್ಮಗಳ ಮರ್ಮ ಒಂದೇಯಾಗಿದೆ. ಧರ್ಮಗಳ ಆಚರಣೆ ಮಾನವೀಯ ಮೌಲ್ಯಗಳನ್ನು ಬಿಂಬಿಸುತ್ತದೆ. ಜೊತೆಗೆ ಮಾನವ ಧರ್ಮ ವಿಶ್ವವ್ಯಾಪಿಯಾಗಿದೆ ಎಂದು ನ್ಯಾಯವಾದಿ ಉದಯಾನಂದ ಎ. ಅಭಿಪ್ರಾಯಪಟ್ಟಿದ್ದಾರೆ.

ನಗರದ ಬಲ್ಮಠದ ಶಾಂತಿ ನಿಲಯದಲ್ಲಿ ಯುನಿವರ್ಸಲ್ ವೆಲ್‌ಫೇರ್ ಫೋರಂ ಕರ್ನಾಟಕದಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಯುನಿವೆಫ್‌ನಿಂದ ಸರ್ವ ಧರ್ಮಿಯರೊಂದಿಗೆ ಸ್ನೇಹ ಸಂವಾದದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ, ‘ದೇಶ, ಧರ್ಮ ಮತ್ತು ವಿಭಜನಾತ್ಮಕ ರಾಜಕೀಯ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಕೆಲವರ ತಪ್ಪಿನಿಂದಾಗಿ ಆಯಾ ಧರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಮಾನವ ಸಂಘಜೀವಿಯಾಗಿದ್ದಾನೆ. ಒಳ್ಳೆಯ ಭಾಷೆ, ಬಟ್ಟೆ ಧರಿಸಿದರೆ ನಾಗರಿಕನಾಗುವುದಿಲ್ಲ. ಧರ್ಮಗಳ ತತ್ವ, ಸಿದ್ಧಾಂತಗಳು ಮನಸಿನಲ್ಲಿ ಇರಬೇಕೇ ಹೊರತು ಅದನ್ನು ಪ್ರಚಾರ ಮಾಡುವುದಲ್ಲ ಎಂದು ತಿಳಿಸಿದರು.

ಕೆಲವು ಘಟನೆಗಳಿಂದ ಧರ್ಮಗಳ ನಡುವೆ ಕಂದಕ ಉಂಟಾಗುತ್ತಿದೆ. ಎಲ್ಲ ಧರ್ಮಗಳ ಸಹೋದರ, ಸಹೋದರಿಯರು ಸೌಹಾರ್ದದಿಂದ ಬೆರೆಯಬೇಕು. ಎಲ್ಲರೂ ನಮ್ಮವರೇ ಆಗಿದ್ದಾರೆ. ಜಾತಿ ಆಧಾರದಲ್ಲಿ ಯಾರನ್ನೂ ಬೇರ್ಪಡಿಸಬಾರದು.ತಂತ್ರಜ್ಞಾನದ ಜೊತೆ ಧರ್ಮದ ಅರಿವನ್ನು ಪಡೆಯುವುದು ಇಂದಿನ ಅಗತ್ಯ. ಧರ್ಮಗಳ ನೆಲೆಗಟ್ಟಿನಲ್ಲಿ ಮಾನವೀಯ ಮೌಲ್ಯಗಳಿವೆ ಎಂದರು. ಪ್ರಸಕ್ತ ದಿನಮಾನಗಳಲ್ಲಿ ರಾಜಕೀಯ ಪಕ್ಷಗಳು ಧರ್ಮಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿವೆ. ಇದರಿಂದ ದೇಶ ಮತ್ತು ಧರ್ಮಗಳನ್ನು ವಿಭಜಿಸುವಂತಹ ಘಟನೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವೆಲೆನ್ಸಿಯಾ ಹೆಬಿಕ್ ಮೆಮೋರಿಯಲ್ ದೇವಾಲಯದ ಸಭಾ ಪಾಲಕ ಫಾ.ಗೋಲ್ಡಿನ್ ಜೆ. ಬಂಗೇರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯ್ನನು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ವಹಿಸಿದ್ದರು.

ವೇದಿಕೆಯಲ್ಲಿ ದ.ಕ. ಮುಸ್ಲಿಂ ಸೆಂಟ್ರಲ್ ಕಮಿಟಿಯ ಸದಸ್ಯ ಹನೀಫ್ ಖಾನ್ ಕೊಡಾಜೆ, ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಆಝಾದ್, ಯುನಿವೆಫ್ ಜಿಲ್ಲಾ ಅಧ್ಯಕ್ಷ ಅಬ್ದುಲ್ಲಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಮರ್ ಮುಕ್ತಾರ್ ಕುರ್‌ಆನ್ ಪಠಿಸಿದರು. ಮುಹಮ್ಮದ್ ಹುದೈಫ್ ಸ್ವಾಗತಿಸಿ, ನಿರೂಪಿಸಿದರು. ಅಬ್ದುಲ್ಲಾ ವಂದಿಸಿದರು.

Be the first to comment

Leave a Reply

Your email address will not be published.


*