ರಮಾನಾಥ ರೈ ಅವರ ಬೆನ್ನು ಬಿಡದ ಅಪಪ್ರಚಾರ

ರಾಜ ವಿಕ್ರಮಾಧಿತ್ಯನನ್ನು ಬೆನ್ನು ಬಿಡದ ಭೇತಾಳನಂತೆ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರನ್ನು ಅಪಪ್ರಚಾರ ಮಾತ್ರ ಬಿಟ್ಟುಹೋಗಿಲ್ಲ ಎಂಬ ಬೇಸರ ಅವರವಲ್ಲಿದೆ. ಕಳೆದ ವಿಧಾನಸಭಾ ಚುನಾವಣಾಪೂರ್ವದಲ್ಲೇ ಸಚಿವರಾಗಿದ್ದ ರಮಾನಾಥ ರೈ ವಿರುದ್ಧ ಅಪಪ್ರಚಾರ ವಿವಿಧ ಮೂಲೆಗಳಿಂದ ಕೇಳಿಬಂದಿತ್ತು. ಚುನಾವಣಾ ಸಂದರ್ಭದಲ್ಲಿ ಈ ಅಪಪ್ರಚಾರ ಸುಂಟರಗಾಳಿಯಾದಿ ಕೇವಲ ರಮಾನಾಥ ರೈ ಅವರನ್ನಲ್ಲದೆ ಕರಾವಳಿಯ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಲಿತೆಗೆದುಕೊಂಡಿತು.

ಚುನಾವಣೆ ಮುಗಿದು ಸರಕಾರ ರಚನೆಯೂ ಆಗಿ ರಮಾನಾಥ  ರೈ ಸೋತು ತಮ್ಮ ಪಾಡಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವಾಗ ಕೂಡ ಅವರ ವಿರುದ್ಧ ಅಪಪ್ರಚಾರಗಳು ಕೇಳಿಬರುತ್ತಿದೆ ಎಂಬುದು ಅವರನ್ನು ವಿಚಲಿತರನ್ನಾಗಿ ಮಾಡಿದೆ. ಅಧಿಕಾರದಲ್ಲಿದ್ದಾಗ ತನ್ನ ಸುದ್ದಿಗಳನ್ನು ಪ್ರಕಟಿಸುತ್ತಿದ್ದ ಮಾಧ್ಯಮಗಳು ಕೂಡ ತನಗೆ ಮಹತ್ವ ನೀಡುತ್ತಿಲ್ಲ ಎಂಬ ಭಾವನೆ ರೈಯವರಲ್ಲಿ ಇದೆ.

ಬಂಟ್ವಾಳದ ಬೇಬಿಯಣ್ಣ ಎಂದೇ ಜನಪ್ರಿಯರಾಗಿದ್ದ ರಮಾನಾಥ ರೈ ಅವರು 1985ರಲ್ಲಿ ಮೊದಲ ಬಾರಿ ಶಾಸಕರಾಗಿ, 1992ರಲ್ಲಿ ಮೊದಲ ಬಾರಿಗೆ ಗೃಹ ಇಲಾಖೆಯ ರಾಜ್ಯ ಸಚಿವರಾಗಿದ್ದರು. ಅನಂತರ ಅವರು ಹಿಂತಿರುಗಿ ನೋಡಿದ್ದಿಲ್ಲ. 1994ರಲ್ಲಿ ಅಬಕಾರಿ ಅನಂತರ 1999ರಲ್ಲಿ ಬಂದರು ಮತ್ತು ಮೀನುಗಾರಿಕಾ ಹಾಗೂ ಮಲೆನಾಡು ಪ್ರದೇಶ ಅಭಿವೃದ್ಧಿ ಸಚಿವರಾಗಿದ್ದರು. 2002 ಎಸ್.ಎ.ಕೃಷ್ಣ ಸರಕಾರದಲ್ಲಿ ಸಾರಿಗ ಸಚಿವರಾಗಿದ್ದ ರಮಾನಾಥ ರೈ ಅವರು 2006ರಲ್ಲಿ ಟೂರಿಸ್ಟ್ ಕಾರು ಮತ್ತು ಖಾಸಗಿ ಬಸ್ ವಿಚಾರಗಳು ಮತ್ತು ಅಲ್ಲಲ್ಲಿ ನಡೆದ ಸಮಾಜೋತ್ಸವದ ಪರಿಣಾಮ ಸೋಲುಂಡರು. 2013ರಲ್ಲಿ ಮತ್ತೆ ಚುನಾಯಿತರಾಗಿದ್ದ ರಮಾನಾಥ ರೈ ಅವರು ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿ ಬಹುಪ್ರಾಮುಖ್ಯತೆಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವರಾಗಿದ್ದರು. ಅತ್ಯಂತ ಸುದೀರ್ಘಕಾಲ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುದೀರ್ಘ ಅವಧಿಗೆ ಶಾಸಕರಾಗಿ ಆಯ್ಕೆಯಾದ ಮತ್ತೊಬ್ಬನಿಲ್ಲ. ರಮಾನಾಥ ರೈ 1985ರಿಂದ ಆರಂಭಗೊಂಡು 2018 ಕೇವಲ ಒಂದು ಅವಧಿಯನ್ನು ಹೊರತು ಪಡಿಸಿ ದೀರ್ಘಕಾಲ ಶಾಸಕರಾಗಿದ್ದರು. 1992ರಿಂದ ವೀರಪ್ಪ ಮೊಯ್ಲಿ ಮಂತ್ರಮಂಡಲದಲ್ಲಿ ಮೊದಲ ಬಾರಿ ಸಚಿವರಾದ ಮೇಲೆ ಪ್ರತಿ ಸಾರಿ ಕಾಂಗ್ರೆಸ್ ಸರಕಾರದ ಬಂದಾಗಲು ಅವರು ಆದ್ಯತೆಯ ಮೇರೆಗೆ ಸಚಿವರಾಗುತ್ತಿದ್ದರು.

ರಾಜ್ಯದ ಇತರ ರಾಜಾಕರಣಿಗಳಿಂದ ವಿಭಿನ್ನವಾಗುವ ಸ್ವಚ್ಛ ಮತ್ತು ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡುವ ರಮಾನಾಥ ರೈ ಇತರ ರಾಜಕಾರಣಿಗಳಂತೆ ಅಪಾರ ಆಸ್ತಿ, ಸಂಪತ್ತು ಕೂಡಿಟ್ಟ ದಾಖಲೆ ಇಲ್ಲ. ನಮ್ಮದೇ ದಕ್ಷಿಣ ಕನ್ನಡ ಜಿಲ್ಲೆಯ ಇವರ ವಿರೋಧಿ ಪಕ್ಷದ ಮುಖಂಡರು ಬೆಂಗಳೂರು ಮತ್ತು ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಹತ್ತಾರು ಮನೆ, ಆಸ್ತಿ ಮಾಡಿಕೊಂಡಿದ್ದರೆ, ರಮಾನಾಥ ರೈ ಹೊಂದಿರುವ ಏಕೈಕ ಮನೆ ಇರುವುಜು ಕಳ್ಳಿಗೆ ಗ್ರಾಮದಲ್ಲಿ. ಅದೂ ಕಾರ್ಪೋರೇಶನ್ ಬ್ಯಾಂಕಿನಿಂದ ಮಾಡಿದ ಸಾಲದಿಂದ ಮನೆ ಕಟ್ಟಿದ ಅವರಿಗೆ ಹಲವು ಬಾರಿ ಬ್ಯಾಂಕಿನ ನೊಟೀಸ್ ನೀಡಿದ್ದು ಇದೆ.

ಯಾವುದೇ ರಾಜಕೀಯ ಪಕ್ಷದವರು, ಯಾವುದೇ ಧರ್ಮ, ಜಾತಿ, ವರ್ಗದವರು ಬಂದರೂ ಯಾವುದೇ ಬೇಧ ಭಾವ ಇಲ್ಲದೆ ಎಲ್ಲರ ಬೇಡಿಕೆಗಳಿಗೆ ಸ್ಪಂದಿಸಿದವರು ರಮಾನಾಥ ರೈ. ಅತೀ ಹೆಚ್ಚಿನ ಪ್ರಮಾಣದ ನಬಾರ್ಡ್ ನಿಧಿ, ಕೇಂದ್ರ ರಸ್ತೆ ನಿಧಿ, ನವಗ್ರಾಮ ಯೋಜನೆ, ದಾದಿಯರ ಆರೋಗ್ಯ ಉಪಕೇಂದ್ರ, ಐಟಿಐ ಮತ್ತು ಪಾಲಿಟೆಕ್ನಿಕ್, ಗ್ರಾಮೀಣ ರಸ್ತೆ ಹಿಂದಿನ ಕಾಲದಲ್ಲಿ ಆಗಿದ್ದರೆ, ಕಳೆದ ಬಾರಿ ಅತೀ ಹಚ್ಚಿನ ಪ್ರಮಾಣದಲ್ಲಿ ಸರಕಾರಿ ಜಮೀನಿನಲ್ಲಿ ಮನೆ ಮಾಡಿದವರಿಗೆ ಹಕ್ಕು ಪತ್ರವನ್ನು ನೀಡುವ 94 ಸಿಸಿ ಯೋಜನೆ ಬಂಟ್ವಾಳದಲ್ಲಿ ಜಾರಿ ಮಾಡಲಾಗಿತ್ತು. ಅದೇ ರೀತಿ ಅಕ್ರಮ ಸಕ್ರಮ ನಿವೇಶನ ಮಂಜೂರು, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇತ್ಯಾದಿ ಹಲವಾರು ಯೋಜನೆಗಳು ಬಂದಿವೆ.

ಬಂಟ್ವಾಳದಲ್ಲಿ ಮಿನಿವಿಧಾನಸೌಧ, ಸುಸಜ್ಜಿತ ಬಸ್ ನಿಲ್ದಾಣ, ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಇತ್ಯಾದಿ ಹತ್ತು ಯೋಜನೆಗಳು ಅನುಷ್ಠಾನ ಆಗಿವೆ ಮತ್ತು ಕೆಲವು ಆಗುತ್ತಿವೆ. ಜನರಿಗೆ ಇಷ್ಟೊಂದು ಸವಲತ್ತು ನೀಡಿದರೂ ಚುನಾವಣೆಯಲ್ಲಿ ರಮಾನಾಥ ರೈ ಅವರಿಗೆ ಸೋಲಾಗುತ್ತದೆ. ಆದರೆ, ರಮಾನಾಥ ರೈ ಅವರ ಜನಪ್ರಿಯತೆ ಕಡಿಮೆ ಆಗಿಲ್ಲ ಎಂಬುದಕ್ಕೆ ಅವರಿಗೆ ದೊರೆತ ಮತಗಳೇ ಸಾಕ್ಷಿ. ಕಳೆದ ಬಾರಿಗಿಂತ ಅವರಿಗೆ ಹೆಚ್ಚಿನ ಮತಗಳು ಬಂದಿವೆ ಎಂಬುದು ಗಮನಾರ್ಹ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಸಂಖ್ಯೆಲ್ಲಿ ಇರುವ ಬಿಲ್ಲವರು ಮತ್ತು ಬ್ಯಾರಿಗಳು ರಮಾನಾಥ ರೈ ಅವರ ಪ್ರಮುಖ ಬೆಂಬಲಿಗರು. ಜನಸಂಖ್ಯೆಯ ಆಧಾರದಲ್ಲಿ ಸಹಜವಾಗಿ ಈ ಸಮುದಾಯದ ಮಂದಿ ರೈಗಳ ಬೆಂಬಲಕ್ಕೂ ನಿಂತಿದ್ದರೂ ಅವರಿಂದ ಪ್ರಯೋಜನ ಕೂಡ ಪಡೆದಿದ್ದರು. ಪ್ರತಿಪಕ್ಷ ನಡೆಸಿದ್ದು ಒಡೆದು ಆಳುವ ನೀತಿ. ಪ್ರತಿಪಕ್ಷ ಹಿಂದೂತ್ವದ ಹೆಸರನಲ್ಲಿ ನಡೆಸಿದ ಅಪಪ್ರಚಾರದಿಂದ ರಮಾನಾಥ ರೈ ಅವರಿಗೆ ತಾತ್ಕಾಲಿಕ ಹಿನ್ನಡೆಯಾಗಿದೆ.

ಬದಲಾಗುತ್ತಿರುವ ಸನ್ನಿವೇಶದಲ್ಲಿ ಆಧುನಿಕ ಕಾಲ ಸಂವಹನ ತಂತ್ರಜ್ಞಾನ ಮಾತ್ರವಲ್ಲದೆ ಸಾಂಪ್ರದಾಯಿಕ ಮಾಧ್ಯಮಗಳ ವಿಚಾರದಲ್ಲಿ ಕೂಡ ರಮಾನಾಥ ರೈ ಹಿಂದುಳಿದುಬಿಟ್ಟರು. ಅವರು ದೇಶದಾದ್ಯಂತ ನಡೆಯುವ ಮೈಕ್ರೋ ಪಾಲಿಟಿಕಲ್ ಮ್ಯಾನೇಜ್ ಮೆಂಟಿಗೆ ಪ್ರಯತ್ನ ಮಾಡಲಿಲ್ಲ. ಹಿಂಬಾಲಕರ ತುತ್ತೂರಿಗೆ ಕಿವಿ ನೀಡಿದರೆ ಹೊರತು ಕ್ಷೇತ್ರದಲ್ಲಿ ನಡೆಯುತ್ತಿರುವ ವಾಸ್ತವ ಅವರ ಗಮನಕ್ಕೆ ಬಂದಿರಲಿಲ್ಲ.

ಸಿದ್ದರಾಮಯ್ಯ ಅವರಂತವರೇ ತನ್ನದೇ ಆದ ಲೈವ್ ವಯರ್ ಸೋಶಿಯಲ್ ಮಿಡಿಯಾ ತಂಡ ಹೊಂದಿದ್ದು ಮಾತ್ರವಲ್ಲದೆ, ದೇಶದಲ್ಲಿ ರಾಜಕೀಯ ಸಮೀಕ್ಷೆ ನಡೆಸುವ ಏಜೆನ್ಸಿಯೊಂದನ್ನು ಪೂರ್ಣಕಾಲಿಕವಾಗಿ ನಿಯೋಜಿಸಿಕೊಂಡು ಸ್ವತಂತ್ರ ಮಾಹಿತಿಯನ್ನು ಪಡೆದುಕೊಂಡು ರಾಜಕೀಯವಾಗಿ ಅಪ್ ಟು ಡೇಟ್ ಆಗಿದ್ದರೂ, ರಮಾನಾಥ ರೈ ಅವರಲ್ಲಿ ಪ್ರಾಮಾಣಿಕ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಲ್ಲ ತಂಡವೊಂದು ಇರಲಿಲ್ಲ ಎಂಬ ಕೊರತೆ ಇಂದಿಗೂ ಅವರ ಗಮನಕ್ಕೆ ಬಂದಿರಲಿಲ್ಲ

1 Comment

Leave a Reply

Your email address will not be published.


*