ಇದು ಮೆಸ್ಸಿಗೆ ನಿರ್ಣಾಯಕ ದಿನ

 

ಫುಟ್ಬಾಲ್ ಲೋಕದ ತಾರೆ ಲಿಯೊನೆಲ್ ಮೆಸ್ಸಿ  ಇಂದು ಗುರುವಾರ ಜೂನ್ 21ರ ಪಂದ್ಯವನ್ನು ಅರ್ಜೆಂಟೀನಾಕ್ಕಾಗಿ ಗೆಲ್ಲಲೇ ಬೇಕಾಗಿದೆ.

ಗುರುವಾರ ರಾತ್ರಿಯ ತನ್ನ ದ್ವಿತೀಯ ಲೀಗ್‌ ಪಂದ್ಯದಲ್ಲಿ ಕ್ರೊವೇಶಿಯಾವನ್ನು ಎದುರಿಸಲಿದ್ದು, ಮುಂದಿನ ಸುತ್ತು ತಲುಪಬೇಕಾದರೆ ಗೆಲುವು ಅನಿವಾರ್ಯ ಎಂಬ ಸ್ಥಿತಿಯಲ್ಲಿದೆ.

ಸೋತರೆ ಇದುವೇ ಮೆಸ್ಸಿಯ ಕೊನೆಯ ವಿಶ್ವಕಪ್ ಪಂದ್ಯಾವಳಿಯೂ ಆಗಿರಬಹುದು.ಅರ್ಜೆಂಟೀನದ ದಂತಕತೆ ಡಿಯಾಗೊ ಮರಡೋನಾರಂತೆ ತನ್ನ ದೇಶಕ್ಕೆ ಪ್ರಶಸ್ತಿಯನ್ನು ಗೆದ್ದು ಕೊಡುವ ಕೊನೆಯ ಸಾಧ್ಯತೆಯೂ ಇದೆ.

ಅರ್ಜೆಂಟೀನಾದ ನಾಯಕ ಬಾರ್ಸಿಲೋನಾದ ಬಹುತೇಕ ಎಲ್ಲ ಕ್ಲಬ್‌ಗಳಲ್ಲಿ ಆಡಿ ಪ್ರಶಸ್ತಿಯನ್ನು ಗೆದ್ದಿರುವ ಮೆಸ್ಸಿ ಇದುವರೆಗೂ ವಿಶ್ವಕಪ್ ಮತ್ತು ಕೋಪಾ ಅಮೆರಿಕದಂಥ ಅಂತರ್‌ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಗೆಲುವಿನ ಸ್ವಾದವನ್ನು ಸವಿದಿಲ್ಲ. ಸದ್ಯ ಅರ್ಜೆಂಟೀನಾದ ಫುಟ್ಬಾಲ್ ಪ್ರೇಮಿಗಳ ಪಾಲಿಗೆ ಮೆಸ್ಸಿ ಜಗತ್ತಿನ ಅತ್ಯಂತ ಶ್ರೇಷ್ಠ ಆಟಗಾರನಾಗಿದ್ದರೂ ಅವರು ಇನ್ನೂ ಮರಡೋನಾರ ಸಾಲಿಗೆ ಬಂದಿಲ್ಲ. ಅದಕ್ಕೆ ಕಾರಣ ಡಿಯಾಗೊ ಮರಡೋನಾ 1986ರಲ್ಲಿ ವಿಶ್ವಕಪ್ ಜಯಿಸಿದ್ದರು.

ರಶ್ಯದಲ್ಲಿ ಅರ್ಜೆಂಟೀನಾದ ಆಟದ ಗುಣಮಟ್ಟ ಬಹಳ ಕಳಪೆಯಾಗಿದೆ. ಅರ್ಹತಾ ಸುತ್ತಿನಲ್ಲಿ ಅರ್ಜೆಂಟೀನ ನಿರ್ವಹಣೆ ಸಮಾಧಾನಕರವಾಗಿರಲಿಲ್ಲ. ಹಾಗಾಗಿ ಮೆಸ್ಸಿ ಹಾದಿ ಇನ್ನಷ್ಟು ದುರ್ಗಮವಾಗಿದೆ. ವಿಶ್ವಕಪ್‌ನಲ್ಲಿ ಅರ್ಜೆಂಟೀನಾದ ಮೊದಲ ಪಂದ್ಯದಲ್ಲಿ ಮೆಸ್ಸಿಯ ಪೆನಾಲ್ಟಿ ಹೊಡೆತವನ್ನು ಐಸ್‌ಲ್ಯಾಂಡ್ ಗೋಲ್‌ಕೀಪರ್ ಹಿಡಿಯುವ ಮೂಲಕ ಮೆಸ್ಸಿಯನ್ನು ಮತ್ತಷ್ಟು ಹತಾಶಗೊಳಿಸಿದ್ದರು.

ಪ್ರೇಕ್ಷಕರ ಗ್ಯಾಲರಿಯಲ್ಲಿ ವೀಕ್ಷಿಸುತ್ತಿದ್ದ ಮರಡೋನಾ, ತಾನೂ ಕೂಡಾ ಸತತ ಐದು ಪೆನಾಲ್ಟಿ ಹೊಡೆತಗಳಲ್ಲಿ ವಿಫಲವಾಗಿದ್ದೆ ಹಾಗೂ ಐಸ್‌ಲ್ಯಾಂಡ್ ಜೊತೆ ಸಾಧಿಸಿದ 1-1 ಡ್ರಾ ಇಡೀ ತಂಡದ ವೈಫಲ್ಯ ಎಂದು ಮೆಸ್ಸಿಯನ್ನು ಸಮಾಧಾನಿಸಿದ್ದರು.

ರಶ್ಯ ವಿಶ್ವಕಪ್ ನಂತರ ಮೆಸ್ಸಿ ಫುಟ್ಬಾಲ್‌ನಿಂದ ನಿವೃತ್ತಿ ಪಡೆಯಬಹುದು. 2016ರಲ್ಲಿ ಕೋಪಾ ಅಮೆರಿಕ ಪಂದ್ಯಾವಳಿಯಲ್ಲಿ ಚಿಲಿ ವಿರುದ್ಧದ ಪೆನಾಲ್ಟಿ ಶೂಟೌಟ್‌ನಲ್ಲಿ ಅವಮಾನಕಾರಿ ಸೋಲಿನಿಂದ ಬೇಸರಗೊಂಡು ನಿವೃತ್ತಿ ಘೋಷಿಸಿದ್ದ ಮೆಸ್ಸಿ ನಂತರ ತಮ್ಮ ನಿರ್ಧಾರವನ್ನು ಹಿಂಪಡೆದಿದ್ದರು. ಆದರೆ ಕ್ಲಬ್ ಮಟ್ಟದಲ್ಲಿ ಮೆಸ್ಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಲಾ ಲೀಗ್ ಮತ್ತು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳ ಜೊತೆಗೆ ಐದು ಬಾರಿ ವಿಶ್ವ ವರ್ಷದ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಷ್ಯಾದಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಮೆಸ್ಸಿಯ ಸಾಮರ್ಥ್ಯ ಮತ್ತು ಆಟದ ಮೇಲಿನ ಹಿಡಿತ ಮತ್ತೊಮ್ಮೆ ಸಾಬೀತಾಗಲಿದೆ.

 

Be the first to comment

Leave a Reply

Your email address will not be published.


*